Home ಜಿಲ್ಲೆ ಬದುಕಿನಲ್ಲಿ ಸಕಾರಾತ್ಮಕತೆ ಅಗತ್ಯ: ಪ್ರೊ. ಬಸವರಾಜ ಕಡ್ಡಿ

ಬದುಕಿನಲ್ಲಿ ಸಕಾರಾತ್ಮಕತೆ ಅಗತ್ಯ: ಪ್ರೊ. ಬಸವರಾಜ ಕಡ್ಡಿ

(ಸಂಜೆ ವಾಣಿ ವಾರ್ತೆ)
ಜಮಖಂಡಿ, ಜು.೧: ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಕಷ್ಟಗಳು ನಮಗೇಕೆ ಬಂದವು, ಅವು ನಮ್ಮ ಕರ್ಮದ ಫಲ ಎಂದು ಯೋಚಿಸುವುದು ನಕಾರಾತ್ಮಕತೆ. ಆದರೆ, ಬಂದದ್ದೆಲ್ಲವೂ ಪರಮಾತ್ಮನ ಪ್ರಸಾದ ಎಂದು ಸ್ವೀಕರಿಸುವುದೇ ಸಕಾರಾತ್ಮಕತೆ ಎಂದು ಹಿರಿಯ ಸಾಹಿತಿ ಪ್ರೊ. ಬಸವರಾಜ ಕಡ್ಡಿ ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ದ ಜೂನ್ ೨೮ರ ಮಾಸಿಕ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿ ಸಕಾರಾತ್ಮಕತೆ’ ವಿಷಯದ ಕುರಿತು ಅವರು ಅನುಭಾವ ಹಂಚಿಕೊAಡರು.
ದುಃಖ ಬಂದರೆ ಅದು ಪರಮಾತ್ಮನ ಪರೀಕ್ಷೆ, ಸುಖ ಬಂದರೆ ಅದು ಪರಮಾತ್ಮನ ಪ್ರಸಾದ. ಪರೀಕ್ಷೆ ಮತ್ತು ಪ್ರಸಾದ ಎರಡೂ ಪರಮಾತ್ಮನದ್ದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ನಮ್ಮ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ನಮ್ಮಲ್ಲಿಯೇ ಇವೆ. ಪರಿಹಾರ ಸಿಗದಿದ್ದರೆ ಸಮಸ್ಯೆಗೆ ಹೊಂದಿಕೊAಡು ಬದುಕುವುದನ್ನು ಕಲಿಯಬೇಕು ಎಂದು ಅವರು ಹೇಳಿದರು.
ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ‘ಷಟ್‌ಸ್ಥಲದ ಭಕ್ತನ ಪ್ರಾರ್ಥನೆ’ ಕುರಿತು ಆಶೀರ್ವಚನ ನೀಡಿ, ದೇವರಲ್ಲಿ ನಂಬಿಕೆ ಇಟ್ಟವನೇ ಭಕ್ತ. ಇಷ್ಟಲಿಂಗ ಬಿಟ್ಟು ಇನ್ನೇನೂ ಇಲ್ಲ ಎಂಬ ಸಮರ್ಪಣಾ ಭಾವವೇ ಭಕ್ತಿ. ಅವಗುಣಗಳನ್ನು ದೂರಮಾಡುವಂತೆ ಪ್ರಾರ್ಥಿಸುವುದೇ ನಿಜವಾದ ಪ್ರಾರ್ಥನೆ ಎಂದರು.
ತನುಶುದ್ಧಿ ಮತ್ತು ಮನಶುದ್ಧಿ ಇದ್ದಾಗ ಮಾತ್ರ ಸಾಧನೆ ಸಾಧ್ಯ. ಸಾಧನೆ ಒಮ್ಮೆಲೇ ಸಾಧ್ಯವಾಗುವುದಿಲ್ಲ. ಹಂತಹAತವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕು. ಸದಾ ಪರಮಾತ್ಮನ ಸ್ಮರಣೆಯಲ್ಲಿ ಇರುವಂತೆ ಪ್ರಾರ್ಥಿಸಬೇಕು ಎಂದು ಹೇಳಿದರು.
ಋಷಿಕೇಶದ ಗಂಗಾಧರ ಸ್ವಾಮಿಗಳು, ಹುನ್ನೂರಿನ ಶಿವಪುತ್ರಯ್ಯ ಸಿದ್ಧಗಿರಿಮಠ, ಮರೇಗುದ್ದಿಯ ದಿಗಂಬರ ಮಠದ ಕೈಲಾಸಪತಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ನಿರ್ಮಾಣ ಹಂತದಲ್ಲಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿದ ಹಿರಿಯರು, ವಿಶೇಷ ಸಾಧಕರು ಹಾಗೂ ಮಹಾಪ್ರಸಾದ ದಾಸೋಹ ಸೇವೆಗೈದ ಸುಭಾಸ ಕೋರಡ್ಡಿ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ, ಜಿ.ಎಸ್. ನ್ಯಾಮಗೌಡ ಮತ್ತು ಬಾಬು ಕರಿಗಾರ ಸಂಗೀತ ಸೇವೆ ಸಲ್ಲಿಸಿದರು. ಡಾ. ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಸಂಗಮೇಶ ತೆಲಸಂಗ ಕಾರ್ಯಕ್ರಮ ನಿರೂಪಿಸಿದರು.