Home ಜಿಲ್ಲೆ ಕಲಬುರಗಿ ಆಳಂದದಲ್ಲಿ ಚೇತನ್ ಅಹಿಂಸಾ ನೇತೃತ್ವದಲ್ಲಿ ರಾಜಕೀಯ ಮುನ್ನೋಟ ಸಭೆ

ಆಳಂದದಲ್ಲಿ ಚೇತನ್ ಅಹಿಂಸಾ ನೇತೃತ್ವದಲ್ಲಿ ರಾಜಕೀಯ ಮುನ್ನೋಟ ಸಭೆ

ಆಳಂದ: ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜಾತ್ಯತೀತತೆಯನ್ನು ಕೇಂದ್ರವಾಗಿಟ್ಟುಕೊAಡು ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಚಿಂತನೆ ನಡೆದಿದ್ದು, ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ೨೫ ಸಾವಿರ ಜನರನ್ನು ಸೇರಿಸಿ ಪಕ್ಷದ ಅಧಿಕೃತ ಘೋಷಣೆ, ಚಿಹ್ನೆ ಹಾಗೂ ಭಾವುಟವನ್ನು ಬಿಡುಗಡೆಗೊಳಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಘೋಷಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಯುವ ಮುಖಂಡರು, ಸಾಮಾಜಿಕ ಹೋರಾಟಗಾರರು, ವಿಚಾರವಂತರು, ಪ್ರಗತಿಪರರು ಹಾಗೂ ಸಮಾನ ಮನಸ್ಕರಿಗಾಗಿ ಆಯೋಜಿಸಿದ್ದ ರಾಜಕೀಯ ಮುನ್ನೋಟ ಸಭೆಯಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಹಾಗೂ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ. ಇದುವರೆಗೆ ಅಧಿಕಾರಕ್ಕೆ ಬಂದಿರುವ ರಾಷ್ಟಿçÃಯ ಪಕ್ಷಗಳಿಂದ ಜನರಿಗೆ ನಿರೀಕ್ಷಿತ ನ್ಯಾಯ ದೊರೆತಿಲ್ಲ. ಹೀಗಾಗಿ ಜಾತ್ಯತೀತತೆ, ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಧ್ಯೇಯದೊಂದಿಗೆ ಹೊಸ ರಾಜಕೀಯ ಶಕ್ತಿಯನ್ನು ಕಟ್ಟುವ ಅಗತ್ಯವಿದೆ ಎಂದು ಹೇಳಿದರು.
ಹೊಸ ಪಕ್ಷವು ಯಾವುದೇ ಒಂದು ವರ್ಗ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಹಕ್ಕು, ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಲಿದೆ. ಜನರ ಸಮಸ್ಯೆಗಳನ್ನು ರಾಜಕೀಯ ವೇದಿಕೆಯ ಮೂಲಕ ಮುನ್ನೆಲೆಗೆ ತಂದು, ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕಿದೆ. ಈ ಆಶಯ ಹೊಂದಿರುವ ಸಮಾನ ಮನಸ್ಕರು ಪಕ್ಷದೊಂದಿಗೆ ಕೈಜೋಡಿಸಬೇಕು ಎಂದು ಚೇತನ್ ಅಹಿಂಸಾ ಮನವಿ ಮಾಡಿದರು.
ಜನಪರ ಸಮಸ್ಯೆಗಳ ಕುರಿತು ಚರ್ಚೆ
ಸಭೆಯಲ್ಲಿ ತಾಲೂಕಿನ ಪ್ರಮುಖ ಸಮಸ್ಯೆಗಳು, ಜನರ ಮೂಲಭೂತ ಅಗತ್ಯಗಳು, ಅಭಿವೃದ್ಧಿಗೆ ಎದುರಾಗಿರುವ ಸವಾಲುಗಳು ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಮುಖಂಡರು ಸಮಗ್ರವಾಗಿ ಚರ್ಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಜನರ ಹಕ್ಕುಗಳು ಹಾಗೂ ಅಭಿವೃದ್ಧಿ ವಿಚಾರಗಳನ್ನು ಗುರುತಿಸಿ, ಅವುಗಳಿಗೆ ಆದ್ಯತೆ ನೀಡುವ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು.
ಮುಂದಿನ ದಿನಗಳಲ್ಲಿ ಜನಪರ ಸಮಸ್ಯೆಗಳನ್ನು ಆಧರಿಸಿ ಹೋರಾಟ, ಜನಜಾಗೃತಿ ಹಾಗೂ ಸಂಘಟನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ರೂಪುರೇಷೆ ಸಿದ್ಧಪಡಿಸಲಾಯಿತು. ಪಕ್ಷಾತೀತವಾಗಿ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊAಡು ವಿಚಾರವಂತರು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ಹಾಗೂ ಯುವಕರನ್ನು ಒಗ್ಗೂಡಿಸಿ ಪರಿಣಾಮಕಾರಿ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ತಾಲೂಕಿನ ಅಭಿವೃದ್ಧಿ, ಜನರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸಂಘಟಿತ ಧ್ವನಿ ಮೂಡಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮುಖಂಡರು, ಹೋರಾಟಗಾರರು, ವಿಚಾರವಂತರು ಹಾಗೂ ಸಮಾನ ಮನಸ್ಕರು ಭಾಗವಹಿಸಿ ಸಲಹೆ-ಅಭಿಪ್ರಾಯಗಳನ್ನು ನೀಡಬೇಕು ಎಂದು ಚೇತನ್ ಅಹಿಂಸಾ ಕರೆ ನೀಡಿದರು.
ಸಭೆಯಲ್ಲಿ ಮಲ್ಲಿಕಾರ್ಜುನ ಶ್ರೀಂಗೇರಿ, ಲಕ್ಷಿö್ಮÃಕಾಂತ ಭಜನ, ಮಹಾದೇವ ಕಾಂಬಳೆ, ಬಾಬುರಾವ್ ಬೀಳಗಿ, ಅಂಬೇಶ ದೇವನೂರ, ರಫೀಕ್ ಕಿಂಗ್, ರಫೀಕ್ ಮುಲ್ಲಾ, ಯು.ಕೆ. ಇನಾಮದಾರ, ಸಿದ್ಧಾರ್ಥ ಸಿಂಗೆ, ಅಕ್ಷಯ ಮಂಟಕಿ, ಸುಧಾಕರ ಮೊದಲೆ, ಕಲ್ಯಾಣಿ ತುಕಾಣಿ, ಅಪ್ಪು ಗೊಪ್ಪಾಳೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.