Home ಜಿಲ್ಲೆ ಬೆಂಗಳೂರು ಗಿಡ ನೆಡುವುದು ಪರಿಸರ ಸ್ನೇಹಿ ಉಪಕ್ರಮ

ಗಿಡ ನೆಡುವುದು ಪರಿಸರ ಸ್ನೇಹಿ ಉಪಕ್ರಮ

ಕೋಲಾರ,ಜು,೪- ಗಿಡಗಳನ್ನು ನೆಡುವುದು ಪರಿಸರ ಸ್ನೇಹಿ ಉಪಕ್ರಮವಾಗಿದ್ದು, ನಾವು ಎಚ್ಚತ್ತು ಗಿಡಮರಗಳನ್ನು ಉಳಿಸಿ ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಗಾಳಿಗೂ ದುಡ್ಡು ನೀಡಬೇಕಾಗುತ್ತದೆ ಎಂದು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಟಿ.ನಾಗರಾಜಪ್ಪ ಎಚ್ಚರಿಸಿದರು.


ತಾಲ್ಲೂಕಿನ ಚಲುವನಹಳ್ಳಿ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಸಹಕಾರ ಇಲಾಖೆ, ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ, ಕೋಲಾರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ ಇವರ ಸಂಯುಕ್ತಾಶ್ರಮದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಗಿಡಗಳನ್ನು ನೆಡುವುದರಿಂದ ಪ್ರಕೃತಿಯನ್ನು ರಕ್ಷಿಸುವ ಕೆಲಸ ಸಹಕಾರಿ ಸಂಘಗಳ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದ ಅವರು, ಸಹಕಾರಿ ಸಂಘದ ಆವರಣ, ಶಾಲಾ ಆವರಣ, ಗ್ರಾಮದ ಬಡಾವಣೆ ಅಥವಾ ಸಾರ್ವಜನಿಕ ಉದ್ಯಾನದಲ್ಲಿ ಗಿಡಮರಗಳನ್ನು ಬೆಳೆಸೋಣ ಎಂದರು.


ಗ್ರಾಮದ ವಾತಾವರಣಕ್ಕೆ ತಕ್ಕಂತೆ ನೆರಳು ನೀಡುವ ಹಾಗೂ ಸುಲಭವಾಗಿ ಬೆಳೆಯುವ ಗಿಡಗಳಾದ ಬೇವಿನ ಮರ, ನುಗ್ಗೆ, ಹೊಂಗೆ, ಅಥವಾ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸ್ಥಳೀಯ ರೈತರನ್ನು ಆಹ್ವಾನಿಸಿ.ಮಣ್ಣು ಮತ್ತು ಗೊಬ್ಬರ, ಗಿಡಗಳನ್ನು ನೆಡುವಾಗ ಮಣ್ಣಿಗೆ ಅಗತ್ಯವಿರುವಷ್ಟು ಸಾವಯವ ಗೊಬ್ಬರವನ್ನು ಬೆರೆಸಿ. ನೆಟ್ಟ ನಂತರ ಗಿಡಕ್ಕೆ ನೀರು ಹಾಕಿ.ಗಿಡಗಳನ್ನು ಪ್ರಾಣಿಗಳಿಂದ ಹಾಳಾಗದಂತೆ ಸುತ್ತಲೂ ರಕ್ಷಣಾ ಬೇಲಿ ಅಳವಡಿಸಿ ಪೋಷಿಸಿ ಆರೈಕೆ ಮಾಡಬೇಕೆಂದರು.


ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ವಾತಾವರಣದ ಜತೆಗೆ ಪ್ರಾಣಿ,ಪಕ್ಷಿಗಳನ್ನು ಉಳಿಸಲು ಸಹಕಾರಿ ಎಂದ ಅವರು, ರಸ್ತೆ ಬದಿ, ಹಣ್ಣಿನ ಮರಗಳನ್ನು ಬೆಳೆಸಿ ಪಕ್ಷಿ ಸಂಕುಲವನ್ನು ಉಳಿಸುವ ಕೆಲಸ ಮಾಡೋಣ ಎಂದರು.


ಕಾರ್ಯಕ್ರಮದಲ್ಲಿ ಬಿ.ನಾಗರಾಜಪ್ಪ, ಸಿ.ತಿಮ್ಮೇಗೌಡ, ಸಿ.ಗೋವಿಂದಗೌಡ, ರಮೇಶ್ ಎಂ, ರಮೇಶ ಸಿ, ಮಮತಾ, ವೆಂಕಟೇಶಪ್ಪ, ಅಪ್ಪೋಜಪ್ಪ, ರಂಗಪ್ಪ ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯದರ್ಶಿ ಭಾರತಿ ಲೆಕ್ಕಾಧಿಕಾರಿ ರವಿ ಹಾಗೂ ಗ್ರಾಮಸ್ಥರಿದ್ದರು.