Home ಜಿಲ್ಲೆ ತಾಜಬಾವಡಿ ಬಳಿ ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ

ತಾಜಬಾವಡಿ ಬಳಿ ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ

ವಿಜಯಪುರ, ಸೆ.12: ತಾಜಬಾವಡಿ ಬಳಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸುವುದರ ಜೊತೆಗೆ, ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಕಾರಾಗೃಹದ ಸಮೀಪ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೃಹತ್ ಗಣೇಶ ವಿಸರ್ಜನಾ ಹೊಂಡ ನಿರ್ಮಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸಿದ್ದೇಶ್ವರ ದೇವಸ್ಥಾನ ಆವರಣದ ಶ್ರೀ ಶಿವಾನುಭವ ಮಂಟಪದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಆಯೋಜಿಸಿದ್ದ ನಗರದ ಎಲ್ಲ ಗಣೇಶ ಮಂಡಳಿಗಳ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಬದಲಾವಣೆಯನ್ನು ಎಲ್ಲರೂ ಸಹಜವಾಗಿ ಒಪ್ಪಿಕೊಳ್ಳಬೇಕು. ಭವಿಷ್ಯದಲ್ಲಿ ವಿಜಯಪುರ ನಗರದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗದಂತೆ ಉತ್ಸವಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ತಾಜಬಾವಡಿಯೂ ಸಂರಕ್ಷಿಸಲ್ಪಡಬೇಕು. ಜಿದ್ದಿಗೆ ಬಿದ್ದು ತಪ್ಪು ಹೆಜ್ಜೆ ಇಡುವ ಬದಲು, ಪರಂಪರೆ ಹಾಗೂ ಪರಿಸರ ಎರಡನ್ನೂ ಕಾಪಾಡಿಕೊಂಡು ಸಾಗಬೇಕು ಎಂದರು.
ತಾಜಬಾವಡಿಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಗಣೇಶ ವಿಸರ್ಜನೆ ಪದ್ಧತಿಗೆ ಧಕ್ಕೆಯಾಗದಂತೆ ಅಲ್ಲಿಯೇ ಶಾಶ್ವತ ವಿಸರ್ಜನಾ ಹೊಂಡ ನಿರ್ಮಿಸಲಾಗುವುದು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವರ್ಷ ಪೈಬರ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮಂಡಳಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮಂಟಪ ನಿರ್ಮಿಸಿಕೊಡುವುದಾಗಿ ಘೋಷಿಸಿದ ಯತ್ನಾಳ, ಈಗಾಗಲೇ ಹಲವು ಗಣೇಶ ಮಂಡಳಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಗಣೇಶ ಮಂಡಳಿಗಳಿಗೆ ತಲಾ ?5 ಸಾವಿರ ದೇಣಿಗೆ ನೀಡಲಾಗುವುದು ಎಂದರು.

ವಿಸರ್ಜನಾ ಮೆರವಣಿಗೆ ಬೇಗ ಆರಂಭಿಸಲು ಸಲಹೆ

ಶ್ರೀ ಸಿದ್ದೇಶ್ವರ ಸಂಕ್ರಮಣದ ನಂದಿಕೋಲ ಮೆರವಣಿಗೆಯ ಸಮಯವನ್ನು ಬದಲಾಯಿಸಿ ಹಗಲು ಹೊತ್ತಿನಲ್ಲಿ ನಡೆಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನರಿಗೂ ಮೆರವಣಿಗೆ ವೀಕ್ಷಿಸಲು ಸಾಧ್ಯವಾಗಿದೆ. ಅದೇ ರೀತಿ ಗಣೇಶ ವಿಸರ್ಜನಾ ಮೆರವಣಿಗೆಯನ್ನೂ ಆದಷ್ಟು ಬೇಗ ಮಧ್ಯಾಹ್ನ ಆರಂಭಿಸಿದರೆ ಸಾರ್ವಜನಿಕರಿಗೆ ವೀಕ್ಷಣೆಗೆ ಅನುಕೂಲವಾಗಲಿದೆ ಎಂದು ಯತ್ನಾಳ ಸಲಹೆ ನೀಡಿದರು.
ಕಳೆದ ವರ್ಷದ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಅವಘಡದ ಕುರಿತು ಮಾತನಾಡಿದ ಅವರು, ಘಟನೆಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಿಸುವವರೆಗೆ ಹೋರಾಟ ನಿಲ್ಲಿಸುವುದಾಗಿ ಕೆಲವರು ಹೇಳಿದ್ದರು. ಆದರೆ, ಆ ಕುಟುಂಬಕ್ಕೆ ತಮ್ಮ ಸಂಸ್ಥೆಯಲ್ಲಿಯೇ ಉದ್ಯೋಗ ನೀಡಿ ಬದುಕಿಗೆ ದಾರಿ ಮಾಡಿಕೊಡಲಾಗಿದೆ. ಗಾಯಗೊಂಡವರಿಗೆ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದರು.
ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ (ಯುಜಿ ಕೇಬಲ್) ಅಳವಡಿಕೆ ಯೋಜನೆ ತಮ್ಮ ಸರ್ಕಾರದ ಅವಧಿಯಲ್ಲಿಯೇ ಮಂಜೂರಾಗಿತ್ತು. ಆದರೆ, ಕಾಮಗಾರಿ ನಡೆಯಲಿಲ್ಲ. ಈಗಿನ ಸರ್ಕಾರವೂ ಅಗತ್ಯ ಹಣ ಬಿಡುಗಡೆ ಮಾಡುತ್ತಿಲ್ಲ. ಯುಜಿ ಕೇಬಲ್ ಅಳವಡಿಕೆಗೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿಗಳಲ್ಲಿ ಪ್ರತ್ಯೇಕ ಲೈನ್ ಬಿಡಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಒತ್ತುವರಿ ತೆರವುಗೊಳಿಸುವಾಗಲೂ ವಿರೋಧ ವ್ಯಕ್ತವಾಗಿತ್ತು. ಆದರೆ, ರಸ್ತೆಗಳು ಅಭಿವೃದ್ಧಿಯಾದ ಬಳಿಕ ಆ ಪ್ರದೇಶಗಳ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ. ಅಭಿವೃದ್ಧಿಗಾಗಿ ಕೆಲವೊಮ್ಮೆ ರಾಜಿ ಅನಿವಾರ್ಯ. ಅಭಿವೃದ್ಧಿಯ ಫಲವಾಗಿ ವಿಜಯಪುರ ನಗರ ಇಂದು ಉತ್ತಮ ಗಾಳಿ ಬೀಸುವ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಯತ್ನಾಳ ಹೇಳಿದರು.

ನಿಯಮ ಪಾಲನೆಗೆ ಪೆÇಲೀಸರ ಮನವಿ

ಡಿಎಸ್‍ಪಿ ಜಿ. ನಾಗರಾಜ ಹಾಗೂ ಸಿಪಿಐ ಪ್ರದೀಪ ತಳಕೇರಿ ಮಾತನಾಡಿ, ವಿಜಯಪುರದಲ್ಲಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಉತ್ಸವ ಯಶಸ್ವಿಯಾಗಲು ಪೆÇಲೀಸ್ ಇಲಾಖೆ ಸದಾ ಸಹಕಾರ ನೀಡಲಿದೆ. ಆದರೆ, ದುರ್ಘಟನೆಗಳನ್ನು ತಡೆಯಲು ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಗಣೇಶ ಮೆರವಣಿಗೆಯಲ್ಲಿ ವಾಹನದ ಮೇಲಿನ ಮೂರ್ತಿಯ ಎತ್ತರ 12 ಅಡಿ ಮೀರದಂತೆ ನೋಡಿಕೊಳ್ಳಬೇಕು. ಸಮಸ್ಯೆಗಳನ್ನು ತಪ್ಪಿಸಲು ಡಿಜೆ ವ್ಯವಸ್ಥೆಯನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಬೇಕು. ಮೆರವಣಿಗೆಯನ್ನು ಆದಷ್ಟು ಬೇಗ ಆರಂಭಿಸಿದರೆ ಸಂಚಾರ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಮಾತನಾಡಿ, ಭಕ್ತರ ಇಚ್ಛೆಯಂತೆ ಹಲವು ವರ್ಷಗಳಿಂದ ತಾಜಬಾವಡಿಯಲ್ಲಿ ನಡೆಯುತ್ತಿರುವ ಗಣೇಶ ವಿಸರ್ಜನೆಯನ್ನು ಮುಂದುವರಿಸಲು ಅಲ್ಲಿಯೇ ಶಾಶ್ವತ ವಿಸರ್ಜನಾ ಹೊಂಡ ನಿರ್ಮಿಸುವ ಉದ್ದೇಶವಿದೆ. ಇದಕ್ಕಾಗಿ ಪುರಾತತ್ವ ಇಲಾಖೆಯಿಂದ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಗಣೇಶೋತ್ಸವ ಯಶಸ್ವಿಯಾಗಲು ಪಾಲಿಕೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮೇಯರ್ ಎಂ.ಎಸ್. ಕರಡಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರುಪಾದಯ್ಯ ಗಚ್ಚಿನಮಠ ಮಾತನಾಡಿದರು.
ಇದೇ ವೇಳೆ ಕಳೆದ ವರ್ಷದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೃತಪಟ್ಟ ಶುಭಂ ಸಂಕಪಾಳ ಅವರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಿದ್ದಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಮನಗೌಡ ಪಾಟೀಲ ಯತ್ನಾಳ, ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಸದಸ್ಯ ಸಾಯಿಬಣ್ಣ ಭೋವಿ, ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ರಾಜಶೇಖರ ಕುರಿಯವರ, ಮಲ್ಲಿಕಾರ್ಜುನ ಗಡಗಿ, ವಿಠ್ಠಲ ಹೊಸಪೇಟೆ, ಜವಾಹರ ಗೋಸಾವಿ, ಗಿರೀಶ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗಜಾನನ ಮಹಾಮಂಡಳಕ್ಕೆ ನೂತನ ಪದಾಧಿಕಾರಿಗಳು

2026ನೇ ಸಾಲಿನ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದ ಅಧ್ಯಕ್ಷರಾಗಿ ಆಕಾಶ ಬಿರಾದಾರ ಅವರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಭೀಮು ಮಾಶ್ಯಾಳ, ಪ್ರವೀಣ ಕೂಡಗಿ, ಸಂದೀಪ ಕಾಳೆ, ಓಗೇಶಕುಮಾರ ನಡುವಿನಕೇರಿ ಹಾಗೂ ರಾಹುಲ್ ಫನಾಳ್ಕರ್ ನೇಮಕಗೊಂಡರು.
ಪ್ರಧಾನ ಕಾರ್ಯದರ್ಶಿಗಳಾಗಿ ಸಿದ್ದನಗೌಡ ಬಿರಾದಾರ ಹಾಗೂ ಈಶ್ವರ ನಾಯ್ಕ, ಕಾರ್ಯದರ್ಶಿಗಳಾಗಿ ಶರಣು ನಾವಿ, ರವಿ ಕುಂಚಿಕೊರವರ, ಅಜಯ ಮುಳವಾಡ, ಜಿತೇಂದ್ರ ದೇಶಪಾಂಡೆ ಹಾಗೂ ಗುರು ಪೂಜಾರಿ ಅವರನ್ನು ನೇಮಕ ಮಾಡಲಾಯಿತು.