
ಕಲಬುರಗಿ,ಸೆ.12: ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಬರೆದ 21 ಮಹಾದಾಸೋಹ ಸೂತ್ರಗಳು ಕೇವಲ ಕಾವ್ಯವಲ್ಲ, ಸಾಹಿತ್ಯವಲ್ಲ, ಮಹಾದಾಸೋಹ ಜೀವನದ ಅಮೃತದ ರಸಫಲಗಳು ಎಂದು ಶರಣಬಸವ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಾ ರೆಡ್ಡಿ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ದಾಸೋಹ ಸೂತ್ರ ವಿಷಯ ಕುರಿತು ಮಾತನಾಡಿ, ಪೂಜ್ಯರು ಬರೆದ ದಾಸೋಹ ಸೂತ್ರಗಳು ಆಧುನಿಕ ವಿಶ್ವವನ್ನು ಕಟ್ಟಬಲ್ಲವು. ಭವಿಷ್ಯತ್ತಿನೆಡೆಗೆ ನೋಡಬಲ್ಲವು. ಹಿಂದಣ ಪರಂಪರೆಯ ಶಕ್ತಿಯನ್ನು ರೂಢಿಸಿಕೊಂಡು ವರ್ತಮಾನದ ಎತ್ತರಿಕೆ ಬಿತ್ತರಿಕೆಗೆ ತೊಡಗಿದವುಗಳು. ಏಳು ಜನ ಮಹಾದಾಸೋಹ ಪೀಠಾಧಿಪತಿಗಳು ಅನುಷ್ಠಾನಿಸಿದ ಮಹಾದಾಸೋಹ ಜೀವನ ಪರಂಪರೆಯ ತುತ್ತತುದಿಯಲ್ಲಿದ್ದುಕೊಂಡು ಮಹಾದಾಸೋಹ ತತ್ತ್ವದ ತಪಸ್ಸುಗೈದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ತಮ್ಮ ಶಿವಾನುಭವದ ಅಭಿವ್ಯಕ್ತಿಗೆ ಮಹಾದಾಸೋಹ ಸೂತ್ರಗಳ ರೂಪ ನೀಡಿ ಆ ಮೂಲಕ ಮಹಾದಾಸೋಹ ದರ್ಶನವನ್ನು ವಿಶ್ವದ ಸಕಲ ಜನಾಂಗಕ್ಕೆ ಅರ್ಪಿಸಿದ್ದಾರೆ. ಡಾ.ಅಪ್ಪ ಅವರ ದಾಸೋಹ ಸಿದ್ಧಿಯ ವಿಚಾರ ಕುರಿತು ಖ್ಯಾತ ಸಂಶೋಧಕ ಡಾ.ಎಲ್.ಬಸವರಾಜು ಅವರು “ದಾಸೋಹವೆಂಬ ಒಂದು ವೀರಶೈವ ಪರಿಭಾಷೆಯನ್ನು ಎತ್ತಿಕೊಂಡು ಅದರ ಮತೀಯ ಅಂಶವನ್ನೆಲ್ಲ ಕಾಸಿ ಕಳೆದು ಅಲ್ಲಿ ವಿಶ್ವಧರ್ಮ ಅನಘ್ರ್ಯ ತತ್ತ್ವದ ನೀಲ ವಜ್ರಗಳನ್ನು ಅದ್ದಿ ನಿರ್ಮಿಸಿದ ದಿವ್ಯಯಾನ ಪಾತ್ರ ಪೂಜ್ಯ ಅಪ್ಪ ಅವರ ದಾಸೋಹ ಸೂತ್ರಗಳು”. ದಾಸೋಹ ಸೂತ್ರಗಳ ಮೇಲೆ ಹಲವಾರು ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅಮೇರಿಕೆಯ ಕವಯಿತ್ರಿ ಜುಡಿತ್ ಕ್ರೋಲ್ ಆಂಗ್ಲ ಭಾಷೆಗೆ ಅನುವಾದಿಸಿದರು. ಖ್ಯಾತ ಪತ್ರಕರ್ತ ಎಂ.ವಿ.ಕಾಮತ್ ಅವರು ಅವುಗಳಿಗೆ ಇಂಗ್ಲೀಷಿನಲ್ಲಿ ವ್ಯಾಖ್ಯಾನ ಬರೆದಿದ್ದಾರೆ. ಎಂ.ಜೆ.ಅಕ್ಬರ್ ಅವರು ಅಮೇರಿಕೆಯ ಪತ್ರಿಕೆಯೊಂದರಲ್ಲಿ ವಿಮರ್ಶೆ ಬರೆದಿದ್ದಾರೆ. ನೋಬೆಲ್ ಪಾರಿತೋಷಕ ವಿಜೇತ ಮದರ್ ಥೆರೆಸಾ ಅವರು ದಾಸೋಹ ಸೂತ್ರಗಳ ಇಂಗ್ಲೀಷ್ ಆವೃತ್ತಿ ಓದಿ, ಹರುಷ ವ್ಯಕ್ತಪಡಿಸಿದ್ದಾರೆ. ಪೆÇ್ರ.ಸ.ಸ.ಮಳವಾಡ, ಖ್ಯಾತ ಸಾಹಿತಿಗಳಾದ ನಿರಂಜನ ಮತ್ತು ಡಾ.ಅನುಪಮಾ ನಿರಂಜನ ಶ್ಲಾಘಿಸಿದ್ದಾರೆ. ಗದುಗಿನ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳು, ರಾಜ್ಯದ ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು ಪೂಜ್ಯರ ದಾಸೋಹ ಸೂತ್ರಗಳು ನಿತ್ಯ ಪಾರಾಯಣಕ್ಕೆ ಅರ್ಹವಾದ ಒಂದು ಉಚ್ಛಕೃತಿಯಾಗಿದೆ ಎಂದು ಹೇಳಿರುವುದನ್ನು ತಿಳಿಸಿದರು.































