Home ಜಿಲ್ಲೆ ಕಲಬುರಗಿ ರೈತರಿಗೆ ಬಾಕಿ ಇರುವ ಬೆಳೆ ವಿಮೆ ಹಣ ನೀಡದೆ ಅನ್ಯಾಯ ಸಿರಗಾಪೂರ ಆಕ್ರೋಶ

ರೈತರಿಗೆ ಬಾಕಿ ಇರುವ ಬೆಳೆ ವಿಮೆ ಹಣ ನೀಡದೆ ಅನ್ಯಾಯ ಸಿರಗಾಪೂರ ಆಕ್ರೋಶ

ಕಲಬುರಗಿ: ಕಳೆದ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ತೊಗರಿ ಬೆಳೆ ನಷ್ಟಕ್ಕೆ ಇನ್ನು ಕೆಲವು ರೈತರ ಖಾತೆಗೆ 2ನೆಯ ಕಂತಿನ ವಿಮೆ ಹಣ ಜಮಾ ಮಾಡದೆ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ಬಲವಾಗಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ವರ್ಷ ಜುಲೈ ತಿಂಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಗೆ ರೈತರು ತೊಗರಿ ಬೆಳೆಗೆ ಪ್ರತಿ ಎಕರೆಗೆ ಸುಮಾರು ರೂ 560,ಉದ್ದು ಬೆಳೆಗೆ ರೂ 350, ಹೆಸರು ಬೆಳೆಗೆ 450, ಸೋಯಾಬೀನ್ ಗೆ ರೂ.280 ರಂತೆ ವಿಮೆ ಕಂಪನಿಗಳಿಗೆ ಹಣ ಪಾವತಿಸಿದ್ದಾರೆ.ಅದರಂತೆ ತೊಗರಿ, ಹತ್ತಿ, ಸೋಯಾಬೀನ್,ಉದ್ದು, ಹೆಸರು ಬೆಳೆಗಳುಹಾಳಾಗಿದ್ದವು.ಅತಿವೃಷ್ಟಿಯಿಂದ ಕಳೆದ ಬಾರಿ ಬಹುತೇಕ ತೊಗರಿ ಬೆಳೆ ನೆಟೆ ಹೊಗಿ ನಷ್ಟವಾಗಿದೆ.ಅದರಲ್ಲೂ ಬಿಸಿಲು ನಾಡು ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಎರಡೆರಡು ಬಾರಿ ಬಿತ್ತನೆ ಮಾಡಲಾಗಿದೆ.ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.ಒಂದು ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 10 ಸಾವಿರ ಖರ್ಚು ಮಾಡಿದ್ದಾರೆ.ಹೇಕ್ಟರಿಗೆ ಸರಾಸರಿ 25 ಸಾವಿರ ಖರ್ಚಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ವಿಮೆ ಹಣ ಮೊದಲನೆ ಕಂತಿನ ಎಕರೆಗೆ 3000 ರೂಪಾಯಿ ನೀಡಲಾಗಿದೆ.ಎರಡನೆ ಕಂತಿನಲ್ಲಿ ಜಿಲ್ಲೆಯ ಹಲವಾರು ರೈತರಿಗೆ ವಿಮೆ ಹಣ ಪಾವತಿ ಮಾಡಿಲ್ಲ.ಬಾಕಿ ವಿಮೆ ಹಣ ತಡೆ ಹಿಡಿಯಲಾಗಿದೆ.ಇದರ ಹಿಂದಿನ ಉದ್ದೇಶ ರೈತರ ವಿಮೆ ಹಣ ಕಬಳಿಸುವ ಹುನ್ನಾರ ನಡೆದಿದೆ.ಸಾಲ ಮಾಡಿ ರೈತರು ವಿಮೆ ಕಂಪನಿಗಳಿಗೆ ಹಣ ಕಟ್ಟಿರುತ್ತಾರೆ . ತಿಂಗಳು ಕಳೆದರೂ ಇನ್ನೂ ಬಾಕಿ ಇರುವ ವಿಮೆ ಹಣ ಬಂದಿಲ್ಲ. ಕೂಡಲೇ ಸರಕಾರ ರೈತರ ಖಾತೆಗಳಿಗೆ ವಿಮೆ ಹಣ ಜಮಾ ಮಾಡುವಂತೆ ಸೂಚಿಸಬೇಕು.ವಿಮೆ ಮಾಡಿಸದ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.