
ರಾಂಚಿ, ಆ.೧೧- ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ರಾಂಚಿಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ ಕ್ರಮವನ್ನು ಖಂಡಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕರೆ ನೀಡಿರುವ ಜಾರ್ಖಂಡ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪೊಲೀಸರ ದೌರ್ಜನ್ಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಬೆಳಗ್ಗೆ ೮ ಗಂಟೆಯಿಂದ ಮಧ್ಯರಾತ್ರಿವರೆಗೆ ಬಂದ್ ಮುಂದುವರಿಯಲಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ಹೇಳಿದ್ದಾರೆ. ಹಾಗೆಯೇ ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಬಸ್ ಸಂಚಾರ ಸ್ಥಗಿತಗೊಂಡು ನಾಗರೀಕರು ತೊಂದರೆ ಅನುಭವಿಸುವಂತಾಯಿತು. ಪೊಲೀಸ್ ಲಾಠಿ ಪ್ರಹಾರ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿ ರಸ್ತೆಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಜಾರ್ಖಂಡ್ ನಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ಲಾಠಿ ಪ್ರಹಾರ ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಳೆ ವಿಧಾನಸಭಾದಿಂದ ಹೊಸ ವಿಧಾನಸಭೆಯವರೆಗೆ ಭಾರಿ ಪ್ರತಿಭಟನೆ ನಡೆಸಿತು.
ಜಾರ್ಖಂಡ್ ಲೋಕಸೇವಾ ಆಯೋಗದಲ್ಲಿ ಸರ್ಕಾರಿ ಉದ್ಯೋಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ. ಈಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ವಿದ್ಯಾರ್ಥಿಗಳು ನಿನ್ನೆ ವಿಧಾನಸಭಾ ಚಲೋ ಹಮ್ಮಿಕೊಂಡಿದ್ದರು. ಈ ವೇಳೆ ಪ್ರತಿಭಟನಾ ನಿರತರ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಈ ಘಟನೆ ಖಂಡಿಸಿ ಎಬಿವಿಪಿ ಉಗ್ರ ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ನೂಕಾಟ ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಉಪವಾಸ ನಿರತ ದೇವೇಂದ್ರ ಆರೋಗ್ಯ ಗಂಭೀರ
ಇದೇ ವೇಳೆ, ಜಾರ್ಖಂಡ್‌ನ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿ ಹೋರಾಟಗಾರ ದೇವೇಂದ್ರ ನಾಥ್ ಮಹತೋ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೊಂದೆಡೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಪರಿಸ್ಥಿತಿಯನ್ನು ಸಂಯಮ, ಸೂಕ್ಷ್ಮತೆ ಮತ್ತು ಸಂಪೂರ್ಣ ಜವಾಬ್ದಾರಿಯಿಂದ ನಿಭಾಯಿಸಿದ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳನ್ನು ಶ್ಲಾಘಿಸಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,ನೀವು ನಿಮ್ಮ ಬೇಡಿಕೆಗಳಿಗಾಗಿ ಶಾಂತಿಯುತ ರೀತಿಯಲ್ಲಿ ಧ್ವನಿ ಎತ್ತಿದ್ದೀರಿ.
ಪ್ರಜಾಪ್ರಭುತ್ವದಲ್ಲಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ನಿಮ್ಮ ಹಕ್ಕು ಮತ್ತು ನಿಮ್ಮ ಧ್ವನಿಯನ್ನು ಗೌರವಿಸುವುದು ಸರ್ಕಾರದ ಜವಾಬ್ದಾರಿ. ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ, ತಂತ್ರಜ್ಞಾನ ಆಧಾರಿತ, ಸುರಕ್ಷಿತ ಮತ್ತು ಹೊಣೆಗಾರಿಕೆಯುತವಾಗಿಸಲು ನಾವು ಬಯಸುತ್ತೇವೆ. ಈ ಬದಲಾವಣೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಆದರೆ, ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಈ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಕಳೆದ ೧೫ ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಜೆಪಿಎಸ್ ಸಿ ಮತ್ತು ಜೆಎಸ್ ಎಸ್ ಸಿ ಪರೀಕ್ಷೆಗಳಲ್ಲಿ ಉದ್ಯೋಗಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರ ಈ ವಿಚಾರದಲ್ಲಿ ಕೇವಲ ವಿಳಂಬ ಮಾಡುತ್ತಿದೆ ಎಂದು ಮರಾಂಡಿ ಹೇಳಿದ್ದಾರೆ. ಹಲವು ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಉಲ್ಲೇಖಿಸಿದ ಅವರು, ರಾಜ್ಯದ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ ಎಂದು ತಿಳಿಸಿದ್ದಾರೆ.
ಮಾಜಿ ಜೆಪಿಎಸ್ ಸಿ ಅಧ್ಯಕ್ಷ ಖಿಯಾಂಗ್ಟೆ ಬಂಧನ
ಜೆಪಿಎಸ್ ಸಿ ಮತ್ತು ಜೆಎಸ್ ಎಸ್ ಸಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಜಿ ಜೆಪಿಎಸ್ ಸಿ ಅಧ್ಯಕ್ಷ ಎಲ್. ಖಿಯಾಂಗ್ಟೆ ಅವರನ್ನು ಜಾರ್ಖಂಡ್ ಸಿಐಡಿ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಲ್ಲಿ ಅವರ ಪಾತ್ರವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರನ್ನು ಹಲವು ಬಾರಿ ವಿಚಾರಣೆ ನಡೆಸಿದ್ದರು.
ರಾಂಚಿಯಲ್ಲಿ ಜೆಪಿಎಸ್ ಸಿ- ಜೆಎಸ್ ಎಸ್ ಸಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಈ ಬಂಧನ ನಡೆದಿದೆ. ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೋಜ್ ಕೌಶಿಕ್ ಅವರು ಖಿಯಾಂಗ್ಟೆ ಅವರ ಬಂಧನವನ್ನು ದೃಢಪಡಿಸಿದ್ದಾರೆ.
ಅಕ್ರಮಗಳ ತನಿಖೆಗೆ ಇ.ಡಿ ಪ್ರವೇಶ
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ೧೪ನೇ ಪ್ರಾಥಮಿಕ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಕೂಡ ಪ್ರವೇಶಿಸಿದೆ. ಸಿಐಡಿ ದಾಖಲಿಸಿರುವ ಎಫ್ ಐಆರ್ ಆಧಾರದ ಮೇಲೆ ಇ.ಡಿಕಳೆದ ವಾರ ಇಸಿಐಆರ್ ದಾಖಲಿಸಿದೆ.
ಕಲಾಪ ಮುಂದೂಡಿಕೆ
ಜಾರ್ಖಂಡ್‌ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಪ್ರಕರಣ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದ ಪರಿಣಾಮ ಗದ್ದಲ, ಕೋಲಾಹಲ ಉಂಟಾಗಿ ಕಲಾಪವನ್ನು ಭೋಜನ ವಿರಾಮದವರೆಗೂ ಮುಂದೂಡಲಾಯಿತು.
ಬೆಳಿಗ್ಗೆ ಕಲಾಪ ಆರಂಭಗೊಂಡಾಗ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಪ್ರಸ್ತಾಪಿಸಿದ ಪ್ರತಿಪಕ್ಷ ಸದಸ್ಯರು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಎನ್‌ಡಿಎ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಗದ್ದಲ ಚಕಮಕಿ ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ ೨ ಗಂಟೆಯವರೆಗೆ ಮುಂದೂಡಲಾಯಿತು.
ಈ ನಡುವೆ ಸದನದ ರಚನಾತ್ಮಕ ಚರ್ಚೆ ಮತ್ತು ಸುಗಮ ಕಾರ್ಯನಿರ್ವಹಣೆಗಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಬರಬೇಕು.ಪ್ರತಿಭಟನಾ ನಿರತ ವಿರೋಧ ಪಕ್ಷದ ಸದಸ್ಯರಿಗೆ ಸದನದಲ್ಲಿ ಫಲಕಗಳನ್ನು ಪ್ರದರ್ಶಿಸುವುದು ಸೂಕ್ತವಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು.































