Home ಜಿಲ್ಲೆ ಜಿಲ್ಲೆಯಲ್ಲಿ ಹೆಚ್ಚಿನ ಆಯುರ್ವೇದ ಆಸ್ಪತ್ರೆ ಆರಂಭಿಸಿ: ಚೆನ್ನೂರ೫೦ ಹಾಸಿಗೆಗಳ ಆಯುರ್ವೇದ ಜಿಲ್ಲಾಸ್ಪತ್ರೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ

ಜಿಲ್ಲೆಯಲ್ಲಿ ಹೆಚ್ಚಿನ ಆಯುರ್ವೇದ ಆಸ್ಪತ್ರೆ ಆರಂಭಿಸಿ: ಚೆನ್ನೂರ೫೦ ಹಾಸಿಗೆಗಳ ಆಯುರ್ವೇದ ಜಿಲ್ಲಾಸ್ಪತ್ರೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ

ಯಾದಗಿರಿ: ದೇಶದ ವೈದ್ಯಕೀಯ ಪದ್ಧತಿಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ವಿಶೇಷ ಮಹತ್ವವಿದ್ದು, ಜಿಲ್ಲೆಯಲ್ಲಿ ಜನರಿಗೆ ಸಕಾಲದಲ್ಲಿ ಆಯುರ್ವೇದ ಚಿಕಿತ್ಸೆ ದೊರೆಯುವಂತೆ ಸರ್ಕಾರ ಹೆಚ್ಚಿನ ಆಸ್ಪತ್ರೆಗಳನ್ನು ಆರಂಭಿಸಿ, ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ವಡಗೇರಾ ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರ ಆಗ್ರಹಿಸಿದರು.

ನಗರದ ಆಯುರ್ವೇದ ಜಿಲ್ಲಾಸ್ಪತ್ರೆಯಲ್ಲಿ ಆಯುರ್‌ಭೂಷಣ ಪ್ರಶಸ್ತಿಗೆ ಭಾಜನರಾದ ಹಿರಿಯ ವೈದ್ಯ ಡಾ. ಪ್ರಮೋದ ಕುಲಕರ್ಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗಡಿಭಾಗದ ಮಾದ್ವಾರ ಆಯುರ್ವೇದ ಆಸ್ಪತ್ರೆಯಲ್ಲಿ ಸುಮಾರು ೩೦ ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಡಾ. ಪ್ರಮೋದ ಕುಲಕರ್ಣಿ ಅವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆಯುರ್ವೇದ ಚಿಕಿತ್ಸೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಅದರ ಪ್ರಯೋಜನಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಶ್ರಮಿಸಿದ್ದಾರೆ ಎಂದು ಚೆನ್ನೂರ ಪ್ರಶಂಸಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣಪ್ಪಗೌಡ ಕೌಳೂರ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಕೇವಲ ಎರಡು ಆಯುರ್ವೇದ ಆಸ್ಪತ್ರೆಗಳು ಹಾಗೂ ಮೂರು ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಪಂಚಕರ್ಮ ಸೇರಿದಂತೆ ಅಗತ್ಯ ಆಯುರ್ವೇದ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ.

ಸಮರ್ಪಕ ಚಿಕಿತ್ಸಾ ಸೌಲಭ್ಯಗಳು ದೊರೆತಲ್ಲಿ ಚಿಕಿತ್ಸೆಗಾಗಿ ಧರ್ಮಸ್ಥಳ, ಹಾಸನ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಸಾಂಗ್ಲಿ ಹಾಗೂ ಮೀರಜ್ ನಗರಗಳಿಗೆ ತೆರಳುತ್ತಿರುವ ರೋಗಿಗಳ ಅಲೆದಾಟ ತಪ್ಪಲಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಮೋದ ಕುಲಕರ್ಣಿ, ಯಾದಗಿರಿ ನಗರದಲ್ಲಿ ೫೦ ಹಾಸಿಗೆಗಳ ಆಯುರ್ವೇದ ಜಿಲ್ಲಾಸ್ಪತ್ರೆ ಸ್ಥಾಪಿಸಲು ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಯೋಜನಾ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆ ಆರಂಭವಾದರೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆಯುರ್ವೇದದ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲು ಅನುಕೂಲವಾಗಲಿದೆ. ಇದರಿಂದ ಜಿಲ್ಲೆಯ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಹಿರಿಯ ಮುಖಂಡ ಹೊನ್ನಪ್ಪ ಮುಸ್ಟೂರ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶರಣಪ್ಪಗೌಡ ಮಾಲಿಪಾಟೀಲ್ ಕೌಳೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.