Home ಜಿಲ್ಲೆ ಬೆಂಗಳೂರು ಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿ ಟಿಪ್ಪಣಿ ಮಂಡನೆ

ಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿ ಟಿಪ್ಪಣಿ ಮಂಡನೆ

ಬೆಂಗಳೂರು, ಸೆ.೨೧-ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನವೇ ಮೇಲ್ಮನೆಯಲ್ಲಿ ವಂದೇ ಮಾತರಂ ಗೀತೆಯ ವಿಚಾರವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಮಮಕಿ ಗದ್ದಲ ನಡುವೆ ಉಪಮುಖ್ಯಮಂತ್ರಿ ಪರಮೇಶ್ವರ್ ಕಸ್ತೂರಿರಂಗನ್ ವರದಿ ವಿಚಾರವನ್ನು ಪ್ರಸ್ತಾಪಿಸಿದ ಬಳಿಕವು ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಸಭಾಪತಿ ಕಲಾಪವನ್ನು ೧೦ ನಿಮಿಷ ಮುಂದೂಡಿದರು.


ಗದ್ದಲದ ನಡುವೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕಸ್ತೂರಿರಂಗನ್ ವರದಿಯನ್ನು ಒಪ್ಪುವುದಿಲ್ಲ ಎಂಬ ನಿಲುವನ್ನು ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರಗಳ ಮೂಲಕ ತಿಳಿಸಿದೆ.ಕೇಂದ್ರ ಸರ್ಕಾರ ಪದೇಪದೇ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದು, ಇದೀಗ ಹೊರಡಿಸಿರುವ ಕರಡು ಅಧಿಸೂಚನೆಗೂ ರಾಜ್ಯ ಸರ್ಕಾರದ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.


ಈ ಕಾರಣಕ್ಕಾಗಿಯೇ ವಿಶೇಷ ಅಧಿವೇಶನದಲ್ಲಿ ವಿಚಾರವನ್ನು ಚರ್ಚೆಗೆ ತಂದಿದ್ದೇವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ರೈತರು, ಸ್ಥಳೀಯ ಜನರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿರುವುದರಿಂದ, ಆ ಎಲ್ಲ ಅಭಿಪ್ರಾಯಗಳನ್ನೂ ಸದನದಲ್ಲಿ ಸಮಗ್ರವಾಗಿ ಚರ್ಚಿಸಬೇಕಾಗಿದೆ ಎಂದು ಪರಮೇಶ್ವರ್ ಹೇಳಿದರು.


ವಿಶೇಷ ಅಧಿವೇಶನದಲ್ಲಿ ವರದಿ ಕುರಿತು ಸಮಗ್ರ ಚರ್ಚೆ ನಡೆಸುವ ಉದ್ದೇಶವಿದೆ ಎಂದು ಅವರು ಈ ಹಿಂದೆ ಕೂಡ ಹೇಳಿದ್ದರು ಎಂದರು.ಈ ವೇಳೆ, ಪರಮೇಶ್ವರ್ ಅವರು ಪ್ರತಿಪಕ್ಷಗಳ ನಿಲುವನ್ನೇ ಪ್ರಶ್ನಿಸಿ, ವಿಪಕ್ಷಗಳು ಕಸ್ತೂರಿರಂಗನ್ ವರದಿಯ ಪರವೋ ಅಥವಾ ವಿರೋಧವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷಗಳು ತಮ್ಮ ನಿಲುವನ್ನು ಹೇಳದಿದ್ದರೆ, ಜನರಿಗೆ ಅವರು ವರದಿಯ ಪರವಾಗಿದ್ದಾರೆ ಎಂಬ ಸಂದೇಶ ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು. ಈ ಹೇಳಿಕೆ ಸದನದಲ್ಲಿ ಮತ್ತಷ್ಟು ರಾಜಕೀಯ ಬಿಸಿ ಏರಲು ಕಾರಣವಾಯಿತು.


ಪರಮೇಶ್ವರ್ ಅವರ ಪ್ರಸ್ತಾಪದ ನಡುವೆಯೇ ವಿಪಕ್ಷ ಸದಸ್ಯರು ಕಸ್ತೂರಿರಂಗನ್ ವರದಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಬಿಜೆಪಿ ನಾಯಕ ಸಿ.ಟಿ. ರವಿ ಅವರು ಕಸ್ತೂರಿರಂಗನ್ ವರದಿ ಹಾಗೂ ಅದರ ಹಿನ್ನೆಲೆಯ ಕುರಿತು ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದರು. ವರದಿಯ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸಿದ ಅವರು, ಈ ಕುರಿತು ವಿಷಾದ ವ್ಯಕ್ತಪಡಿಸಬೇಕು ಎಂಬ ಅಭಿಪ್ರಾಯವನ್ನು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಕ್ತಪಡಿಸಿದರು.ಇದರ ನಡುವೆ ಸದನದಲ್ಲಿ ಘೋಷಣೆಗಳು ಮುಂದುವರಿದಿದ್ದರಿಂದ ಕಲಾಪದ ಸಹಜ ಪ್ರಕ್ರಿಯೆಗೆ ಅಡ್ಡಿಯಾಯಿತು.


ಸೆ.೨೧ರಿಂದ ೨೩ರವರೆಗೆ ನಡೆಯುತ್ತಿರುವ ವಿಶೇಷ ಅಧಿವೇಶನವನ್ನು ಮುಖ್ಯವಾಗಿ ಕಸ್ತೂರಿರಂಗನ್ ವರದಿ ಮತ್ತು ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದೆ. ಸೆ.೨೧ರಂದು ಕಸ್ತೂರಿರಂಗನ್ ವರದಿ, ನಂತರದ ದಿನಗಳಲ್ಲಿ ರೈತರ ಸಮಸ್ಯೆಗಳು ಮತ್ತು ಬರಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.