
ಬೀದರ್,ಸೆ.೨೭:ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೀದರ್ ಜಿಲ್ಲೆಯಲ್ಲಿ ಭೀಕರ ಬರದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸೆ.೩೦ರಂದು ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ಅಂದು ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಅಂದು ಆತ್ಮೀಯರು, ಅಭಿಮಾನಿಗಳು, ಕಾರ್ಯಕರ್ತರು ಹಾರ, ತುರಾಯಿ, ಬುಕ್ಕೆ ಹಾಗೂ ಸನ್ಮಾನ ಮಾಡಬಾರದು. ಶುಭಾಶಯ ಕೋರುವ ಕಟೌಟ್, ಬ್ಯಾನರ್ ಗಳು ಸಹ ಹಾಕಬಾರದು. ಇದರ ಬದಲಾಗಿ ಅಂದು ಗ್ರಾಮೀಣ ಭಾಗದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್, ಡಿಕ್ಷನರಿ ಸೇರಿ ಇತರೆ ಪಠ್ಯ ಪರಿಕರಗಳನ್ನು ನೀಡುವ ಮೂಲಕ ಅವರ ಶಿಕ್ಷಣಕ್ಕೆ ನೆರವಾಗಬೇಕು ಎಂದು ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ಜನ್ಮ ದಿನ ಆಚರಣೆಗಿಂತ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಮತ್ತು ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಮುಖ್ಯವಾಗಿದೆ. ಜನ್ಮ ದಿನದಂದು ಬೆಳಿಗ್ಗೆ ಹಳ್ಳಿಖೇಡ್ ಹತ್ತಿರದ ಸೀಮಿ ನಾಗಣ್ಣ ದೇವಸ್ಥಾನ ಹಾಗೂ ಸುಕ್ಷೇತ್ರ ಚಾಂಗಲೇರಾದ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸಮಸ್ತ ಜನತೆಗೆ ಹಾಗೂ ರೈತರಿಗೆ ಸುಖ, ಶಾಂತಿ, ಸಮೃದ್ಧಿ ಕೊಡಲಿ. ಉತ್ತಮ ಮಳೆ-ಬೆಳೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುವುದು. ಎಲ್ಲರೂ ಸಹಕರಿಸಬೇಕು ಎಂದು ಕೋರಿದ್ದಾರೆ.






















