Home ಸಿನೆಮಾ NH 66’ರಲ್ಲಿ ರಾಜೇಶ್ ನಟರಂಗ; ಪಾತ್ರದ ಬಗ್ಗೆ ಹೆಚ್ಚಿದ ಕುತೂಹಲ!

NH 66’ರಲ್ಲಿ ರಾಜೇಶ್ ನಟರಂಗ; ಪಾತ್ರದ ಬಗ್ಗೆ ಹೆಚ್ಚಿದ ಕುತೂಹಲ!

ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್ ನಟರಂಗ ಇದೀಗ ‘NH 66’ ಚಿತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆಯಲು ಸಜ್ಜಾಗಿದ್ದಾರೆ. ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ರಾಜೇಶ್ ನಟರಂಗ ಅವರ ಮೊದಲ ನೋಟ ಇತ್ತೀಚೆಗೆ ಬಿಡುಗಡೆಯಾಗಿದ್ದು, ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿರುವುದು ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

‘NH 66’ನಲ್ಲಿ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಿಂದ ಗೋವಾ ಮಾರ್ಗವಾಗಿ ಮುಂಬೈಗೆ ಸಾಗುವ ಪಯಣದ ಹಿನ್ನೆಲೆಯಲ್ಲಿ ಕಥೆ ತೆರೆದುಕೊಳ್ಳುತ್ತದೆ. ಪ್ರಮೋದ್ ಶೆಟ್ಟಿ ಕ್ಯಾಬ್ ಚಾಲಕನಾಗಿ ಕಾಣಿಸಿಕೊಂಡರೆ, ಶೃತಿ ಹರಿಹರನ್ ಪಯಣಿಗೆಯ ಪಾತ್ರದಲ್ಲಿದ್ದಾರೆ. ಆದರೆ ರಾಜೇಶ್ ನಟರಂಗ ಅವರ ಪಾತ್ರದ ಸ್ವರೂಪವನ್ನು ನಿರ್ದೇಶಕರು ಸದ್ಯಕ್ಕೆ ರಹಸ್ಯವಾಗಿಟ್ಟಿದ್ದಾರೆ.

ಚಿತ್ರದ ಆರಂಭದಿಂದಲೂ ವಿಭಿನ್ನ ಕಾರಣಗಳಿಂದ ಗಮನ ಸೆಳೆಯುತ್ತಿರುವ ‘NH 66’ರ ಚಿತ್ರೀಕರಣ ಹಾಗೂ ನಂತರದ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮಭಕ್ತರಾಗಿರುವ ನಿರ್ಮಾಪಕ-ನಿರ್ದೇಶಕ ಮಂಜುನಾಥ್ ಟಿ.ಆರ್., ರಾಯರ ಸನ್ನಿಧಿಯಲ್ಲಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಇದೀಗ ಚಿತ್ರ ನಿರೀಕ್ಷೆಯಂತೆ ಪೂರ್ಣಗೊಂಡಿರುವುದು ರಾಯರ ಕೃಪೆ ಎಂದಿದ್ದಾರೆ.

ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಂಜುನಾಥ್ ಟಿ.ಆರ್. ಅವರೇ ರಚಿಸಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ, ಸ್ವಾಮಿನಾಥನ್ ಸಂಗೀತ ಸಂಯೋಜನೆ ನಿರ್ವಹಿಸಿದ್ದಾರೆ. ‘ONE HIGHWAY MANY SECRETS’ ಎಂಬ ಅಡಿಬರಹ ಹೊಂದಿರುವ ಈ ಚಿತ್ರದಲ್ಲಿ ಆ ಹೆದ್ದಾರಿಯ ಪಯಣದೊಂದಿಗೆ ಯಾವೆಲ್ಲ ರಹಸ್ಯಗಳು ತೆರೆದುಕೊಳ್ಳಲಿವೆ ಎಂಬುದೇ ಕುತೂಹಲದ ಸಂಗತಿ.