
ಬೆಂಗಳೂರು, ಜು. ೧೫: ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಮನೆ ಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ ೨೦೨೫ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ವಿಧೇಯಕವನ್ನು ಅಂತಿಮಗೊಳಿಸುವ ಮುನ್ನ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ಜವಾಹರಲಾಲ್ ನೆಹರು ತಾರಾಲಯದ ಸಿ.ವಿ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಐದು ನಗರ ಪಾಲಿಕೆಗಳ ಆಯುಕ್ತರು ಉಪಸ್ಥಿತರಿದ್ದರು.
“ಇಂದು ಎಲ್ಲರಿಗೂ ಮಾತನಾಡಲು ಅವಕಾಶ ಸಿಕ್ಕಿರಲಿಕ್ಕಿಲ್ಲ. ಮುಂದಿನ ೧೦ ದಿನಗಳೊಳಗೆ ಇ-ಮೇಲ್ ಮೂಲಕ ನಿಮ್ಮ ಸಲಹೆಗಳನ್ನು ಕಳುಹಿಸಿ. ಪ್ರತಿಯೊಂದು ಸಲಹೆಯನ್ನು ಪರಿಶೀಲಿಸುತ್ತೇನೆ. ನಿಮ್ಮ ಸಮಸ್ಯೆಗಳ ಅರಿವು ನನಗಿದೆ. ನಾನೂ ಅಪಾರ್ಟ್‌ಮೆಂಟ್ ಹೊಂದಿದ್ದೇನೆ. ಈ ಸರ್ಕಾರ ನನ್ನದಲ್ಲ, ನಿಮ್ಮದು,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಮಹತ್ವದ ಯೋಜನೆಗಳನ್ನು ಕೈಗೊಂಡಿದ್ದು, ಎರಡು ಸುರಂಗ ಮಾರ್ಗಗಳು ಹಾಗೂ ೨೬ ಸಾವಿರ ಕೋಟಿ ವೆಚ್ಚದ ೧೩೦ ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಟೀಕೆಗಳ ನಡುವೆಯೂ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿನ ಜನಸಂಖ್ಯೆ ೨೫ ವರ್ಷಗಳಲ್ಲಿ ೭೦ ಲಕ್ಷದಿಂದ ೧.೪೦ ಕೋಟಿಗೆ ಏರಿಕೆಯಾಗಿದ್ದು, ಪ್ರತಿದಿನ ಸುಮಾರು ೩ ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ನಗರದಲ್ಲಿ ೧.೩೦ ಕೋಟಿ ವಾಹನಗಳಿವೆ. ಜನಸಂಖ್ಯೆಯ ಸುಮಾರು ೧೯% ಮಂದಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿವರಿಸಿದರು.
೧೯೭೨ರ ಅಪಾರ್ಟ್‌ಮೆಂಟ್ ಕಾಯ್ದೆ ಇಂದಿನ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಹೊಸ ಕಾನೂನು ರೂಪಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುತ್ತಿದೆ. ಈ ವಿಧೇಯಕ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿರಬೇಕು. ನಂತರ ವಿಧಾನಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಹೊಸ ವಿಧೇಯಕದ ಅಗತ್ಯವಿದೆ: ಕೃಷ್ಣ ಬೈರೇಗೌಡ:
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ೧೯೭೨ರ ಅಪಾರ್ಟ್‌ಮೆಂಟ್ ಕಾನೂನಿಗೆ ಈಗ ೫೦ ವರ್ಷಗಳಾಗಿವೆ. ಕಳೆದ ಎರಡು ದಶಕಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಹೊಸ ಕಾನೂನು ತರಬೇಕಾಗಿದೆ ಎಂದರು.
“ಇದು ಅಂತಿಮ ಕರಡು ಅಲ್ಲ. ವಿಧಾನಸಭೆಯಲ್ಲಿ ಮಂಡಿಸುವ ಮೊದಲು ನಿಮ್ಮ ಅಭಿಪ್ರಾಯ ಪಡೆಯುತ್ತಿದ್ದೇವೆ. ಇಂದೇ ಹೇಳಬೇಕೆಂಬ ಒತ್ತಡ ಇಲ್ಲ. ಬರವಣಿಗೆಯಲ್ಲಿಯೂ ಸಲಹೆ ಸಲ್ಲಿಸಬಹುದು. ಇನ್ನಷ್ಟು ಸುಧಾರಣೆಗಳನ್ನು ಸೇರಿಸಲಾಗುವುದು,” ಎಂದರು.
ಕೆಲವು ಅಪಾರ್ಟ್‌ಮೆಂಟ್‌ಗಳು ಸಾವಿರಾರು ಮನೆಗಳನ್ನು ಒಳಗೊಂಡಿದ್ದು, ವಿಲ್ಲಾ, ವಾಣಿಜ್ಯ ಬಳಕೆ ಸೇರಿದಂತೆ ಸಂಕೀರ್ಣ ಸಮಸ್ಯೆಗಳಿವೆ. ಅವುಗಳಿಗೆ ಸಮಗ್ರ ಪರಿಹಾರ ನೀಡುವ ರೀತಿಯಲ್ಲಿ ಹೊಸ ಕಾನೂನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಸೊಸೈಟೀಸ್ ಕಾಯ್ದೆ ಅಥವಾ ೧೯೭೨ರ ಕಾಯ್ದೆಯಡಿ ನೋಂದಾಯಿತ ಅಸೋಸಿಯೇಷನ್‌ಗಳು ಇಂದಿನ ಅಗತ್ಯಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್ ಮಾಲೀಕತ್ವ, ನಿರ್ವಹಣೆ, ಅಸೋಸಿಯೇಷನ್‌ಗಳ ಜವಾಬ್ದಾರಿ ಹಾಗೂ ಮಾಲೀಕರ ಹಕ್ಕುಗಳನ್ನು ಸ್ಪಷ್ಟಗೊಳಿಸುವ ಹೊಸ ವಿಧೇಯಕ ಅಗತ್ಯವಾಗಿದೆ ಎಂದು ಸಚಿವರು ತಿಳಿಸಿದರು.
ವಿಧೇಯಕದ ಪ್ರಮುಖ ಉದ್ದೇಶಗಳು:
ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳ ರಕ್ಷಣೆ.
ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳ ಮೇಲಿನ ಮಾಲೀಕರ ಹಕ್ಕು ಖಚಿತಪಡಿಸುವುದು.
ಅಪಾರ್ಟ್‌ಮೆಂಟ್ ನೋಂದಣಿ ಹಾಗೂ ಆಡಳಿತಕ್ಕೆ ಸ್ಪಷ್ಟ ಕಾನೂನು ಚೌಕಟ್ಟು.
ಬಿಲ್ಡರ್, ಡೆವಲಪರ್ ಹಾಗೂ ಅಸೋಸಿಯೇಷನ್‌ಗಳ ಜವಾಬ್ದಾರಿಗಳ ನಿರ್ಧಾರ.
ನಿಧಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ.
ಪರಿಣಾಮಕಾರಿ ವಿವಾದ ಪರಿಹಾರ ವ್ಯವಸ್ಥೆ.
ಹಳೆಯ ಹಾಗೂ ಅಸುರಕ್ಷಿತ ಅಪಾರ್ಟ್‌ಮೆಂಟ್‌ಗಳ ಮರು ಅಭಿವೃದ್ಧಿಗೆ ಕಾನೂನುಬದ್ಧ ಅವಕಾಶ.
ಸರ್ಕಾರ ಕರಡು ವಿಧೇಯಕವನ್ನು ಅಂತಿಮಗೊಳಿಸುವ ಮೊದಲು ರಾಜ್ಯದ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು, ನಿವಾಸಿಗಳು ಹಾಗೂ ಇತರ ಪಾಲುದಾರರಿಂದ ಸಲಹೆಗಳನ್ನು ಪಡೆದು ನಂತರ ವಿಧಾನಸಭೆಯಲ್ಲಿ ಮಂಡಿಸಲು ನಿರ್ಧರಿಸಿದೆ.


































