Home ಮುಖಪುಟ ಸುದ್ದಿ ಜೈಲಿನಿಂದ ಪರಾರಿಯಾಗಿದ್ದ ಕೈದಿಗೆ ಗುಂಡಿಕ್ಕಿ ಸೆರೆ

ಜೈಲಿನಿಂದ ಪರಾರಿಯಾಗಿದ್ದ ಕೈದಿಗೆ ಗುಂಡಿಕ್ಕಿ ಸೆರೆ

ಕಲಬುರಗಿ,ಜು.೧೫-ನಗರದ ಜೇವರ್ಗಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಒಬ್ಬನನ್ನು ಇಂದು ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ.


ಪೋಕ್ಸೋ ಪ್ರಕರಣದ ಆರೋಪದಲ್ಲಿ ಕೈದಿಯಾಗಿದ್ದ ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸಂತೋಷ ಬಸಪ್ಪ ಮೇತ್ರೆ ( ೨೮) ಬಂಧಿತ. ತಪ್ಪಿಸಿಕೊಂಡ ಕೈದಿಗಳ ಶೋಧಕ್ಕೆ ೩ ತಂಡ ರಚಿಸಲಾಗಿತ್ತು. ಇಂದು ಬೆಳಗಿನ ಜಾವಹುಮನಾಬಾದ್ ರಸ್ತೆ ಕಪನೂರ ಬಳಿ ಸಂತೋಷ ಬಸಪ್ಪ ಮೇತ್ರೆ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ದಾಳಿ ನಡೆಸಿದ್ದಾರೆ.


ಫರತಾಬಾದ್ ಠಾಣೆ ಪೊಲೀಸ್ ಸಿಬ್ಬಂದಿ ಕಲ್ಯಾಣಕುಮಾರ್ ಮತ್ತು ವಿಶ್ವವಿದ್ಯಾಲಯ ಠಾಣೆ ಪ್ರಕಾಶ ಎಂಬುವವರ ಮೇಲೆ ಹರಿತವಾದ ಆಯುಧದಿಂದ ಪರಾರಿಕೈದಿ ಹಲ್ಲೆ ನಡೆಸಿದ್ದಾನೆ. ಫರತಾಬಾದ್ ಪಿಐ ಹುಸೇನ್ ಭಾಷಾ ಪರಾರಿಯಾಗಲು ಯತ್ನಿಸಿದ ಕೈದಿಯ ಕಾಲಿಗೆ ಗುಂಡು ಹಾರಿಸಿ ಅವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಕೈದಿಯನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್ ಡಿ, ಎಸಿಪಿ ಶಾಲೂ ಅವರು ತಿಳಿಸಿದ್ದಾರೆ.


ಘಟನೆಯ ಹಿನ್ನೆಲೆ:


ನಿನ್ನೆ ಬೆಳಿಗ್ಗೆ ಮೂವರು ಕೈದಿಗಳಾದ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸಂತೋಷ ಬಸಪ್ಪ ಹಾಗೂ ಬೀದರ್ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯ ಕಾರಾಗೃಹದ ಬ್ಯಾರೆಕ್ ನಂ ೫ ರಿಂದ ಪರಾರಿಯಾಗಿದ್ದರು.


ಈ ಮೂವರು ಕೈದಿಗಳಲ್ಲಿ ಇಬ್ಬರು ಪೋಕ್ಸೊ, ಒಬ್ಬ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.


ಈ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪರಾರಿಯಾದ ಕೈದಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.


ಪೋಕ್ಸೊ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಯೊಬ್ಬ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಅಫಜಲಪುರ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಘಟನೆ ಬೆನ್ನಲ್ಲೇ ಈಗ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿಟ್ಟಿದೆ. ಸ್ವತಃ ಗೃಹ ಸಚಿವರ ತವರಿನಲ್ಲೇ ಇಂತಹ ದೊಡ್ಡ ಲೋಪಗಳು ಪದೇ ಪದೇ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.