
ಕಲಬುರಗಿ,ಜು.15-ಕಳೆದ 13 ವರ್ಷಗಳಿಂದ ಇಲ್ಲಿನ ರಂಗ ಸಂಗಮ ಕಲಾವೇದಿಕೆಯು ಕೊಡಮಾಡುತ್ತಾ ಬಂದಿರುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಕಲಾವಿದ ರಾಚಯ್ಯಸ್ವಾಮಿ ಹಿರೇಮಠ ಕೊಪ್ಪಳ ಹಾಗೂ
ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಕಲಾವಿದೆ ಹಾಗೂ ನಿರ್ದೇಶಕಿ ವೀಣಾ ಶರ್ಮಾ ಹುಬ್ಬಳ್ಳಿ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಆಯ್ಕೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸದಸ್ಯರಾದ ಹಿರಿಯ ರಂಗಕರ್ಮಿ ಎಚ್.ಎಸ್.ಬಸವಪ್ರಭು, ರಂಗಕರ್ಮಿ
ಶಾಂತಾ ಕುಲಕರ್ಣಿ, ಸಾಹಿತಿ ಬಿ.ಎಚ್.ನಿರಗುಡಿ, ರಂಗಕರ್ಮಿ ನಾರಾಯಣ ಕುಲಕರ್ಣಿ, ರಂಗ ನಿರ್ದೇಶಕ ವಿಶ್ವರಾಜ ಪಾಟೀಲ್, ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ರಂಗ ಸಂಗಮ ಕಲಾವೇದಿಕೆಯ ಸದಸ್ಯ ರಾಜೇಶ್ವರಿ ಗಲಗಲಿ ಹಾಗೂ ರಂಗ ಸಂಗಮ ಕಲಾವೇದಿಕೆಯ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಇದ್ದರು.
ಜುಲೈ 19 ರಂದು ನಗರದ “ವಿಶ್ವೇಶ್ವರಯ್ಯ ಭವನದಲ್ಲಿ” ಆಯೋಜಿಸಲಾಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಲಾ 10 ಸಾವಿರ ರೂ. ಪ್ರಶಸ್ತಿ ಪತ್ರ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ರಂಗ ಸಂಗಮ ಕಲಾ ವೇದಿಕೆ ಕಾರ್ಯದರ್ಶಿ ಅನಿಕೇತ ಮಡಕಿ ತಿಳಿಸಿದ್ದಾರೆ.































