Home ಜಿಲ್ಲೆ ಬೆಂಗಳೂರು ಗ್ಯಾರಂಟಿಗಳಿಗೆ ಹೊಸ ಅರ್ಜಿ: ಫಲಾನುಭವಿಗಳ ಕತ್ತರಿಗೆ ಸಂಚು

ಗ್ಯಾರಂಟಿಗಳಿಗೆ ಹೊಸ ಅರ್ಜಿ: ಫಲಾನುಭವಿಗಳ ಕತ್ತರಿಗೆ ಸಂಚು

ಬೆಂಗಳೂರು, ಜೂ. ೧೪- ಗ್ಯಾರಂಟಿಗಳಿಗೆ ಹೊಸ ಅರ್ಜಿ ಸಲ್ಲಿಕೆಯ ಹಿಂದೆ ಇರುವುದು ಅರ್ಹತೆಯ ಅಳತೆ ಗೋಲು ಅಲ್ಲ. ಫಲಾನುಭವಿಗಳಿಗೆ ಕತ್ತರಿ ಹಾಕುವ ಒಳ ಸಂಚು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.


ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಗೃಹಲಕ್ಷ್ಮಿಗೆ ಕಷ್ಟ, ಗೃಹಜ್ಯೋತಿಗೆ ಕತ್ತಲು. ಅನರ್ಹರ ನೆಪದಲ್ಲಿ ಬಡವರ ಹಕ್ಕು ಕಬಳಿಸಲು ಬಂದಿದೆ ಹೊಸ ಅರ್ಜಿ ಎಂಬ ಹೊಸ ಕತ್ತರಿ ಎಂದು ವ್ಯಂಗ್ಯವಾಡಿದ್ದಾರೆ.


ಸತ್ತವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆಯಲು ಇಡೀ ಗ್ಯಾರಂಟಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸಬೇಕೆ ಎಂದು ಪ್ರಶ್ನಿಸಿರುವ ಅವರು, ಇದು ಯಾವ ಸೀಮೆಯ ತೊಘಲಕ್ ದರ್ಬಾರ್ ಸ್ವಾಮಿ ಎಂದು ಹರಿಹಾಯ್ದಿದ್ದಾರೆ.


ಅನರ್ಹರನ್ನು ತಡೆಯುವ ನೆಪದಲ್ಲಿ ಈಗಾಗಲೇ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಸ್ವಾಭಿಮಾನಿ ತಾಯಂದಿರುವ ಮತ್ತು ಜನಸಾಮಾನ್ಯರನ್ನು ಮತ್ತೆ ಕಚೇರಿಗಳ ಮುಂದೆ, ಸೈಬರ್ ಸೆಂಟರ್‌ಗಳ ಮುಂದೆ ಸಾಲಿನಲ್ಲಿ ನಿಲ್ಲಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.


ನಿಮ್ಮ ಸರ್ಕಾರದ ಕಮೀಷನ್ ದಂಧೆ ಹಾಗೂ ದುರಾಡಳಿತದಿಂದ ರಾಜ್ಯದ ಬೊಕ್ಕಸ ಸಂಪೂರ್ಣ ದಿವಾಳಿಯಾಗಿದೆ. ಗ್ಯಾರಂಟಿಗೆ ನೀಡಲು ಹಣವಿಲ್ಲದೆ ಈಗ ಜನರಿಗೆ ತೊಂದರೆ ಕೊಟ್ಟು ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸುವುದೇ ನಿಮ್ಮ ಅಸಲಿ ಅಜೆಂಡಾ ಎನ್ನುವ ಸತ್ಯವನ್ನು ಅರಿಯದಷ್ಟು ಅಮಾಯಕರಲ್ಲ ಸ್ವಾಭಿಮಾನಿ ಕನ್ನಡಿಗರು. ಮನೆಗೆ ತಲುಪಲಿದೆ ನಮೂನೆ ಎಂಬ ನಿಮ್ಮ ಹೊಸ ನಾಟಕ ಯಾರಿಗಾಗಿ ಎಂದು ಪ್ರಶ್ನಿಸಿದ್ದಾರೆ.


ಬಡವರ, ಶೋಷಿತರ ಹಕ್ಕಿನ ದುಡ್ಡಿಗೆ ಕತ್ತರಿ ಹಾಕಲು ಹೊರಟಿರುವ ನಿಮ್ಮ ಜನ ವಿರೋಧಿ ನೀತಿಯನ್ನು ಸ್ವಾಭಿಮಾನಿ ಕನ್ನಡಿಗರು ಸಹಿಸುವುದಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಸಾಲಿನಲ್ಲಿ ನಿಲ್ಲಿಸಿ ಕಾಟ ಕೊಡುವುದನ್ನು ತಕ್ಷಣ ನಿಲ್ಲಿಸಿ. ಬೊಕ್ಕಸದ ದುಡ್ಡನ್ನು ಲೂಟಿ ಹೊಡೆಯುವುದನ್ನು ಬಿಟ್ಟು ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಸೌಲಭ್ಯಗಳನ್ನು ತಲುಪಿಸಿ. ಇಲ್ಲದಿದ್ದರೆ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಗಂಟು ಮೂಟೆ ಕಟ್ಟಿಸಿ ಶಾಶ್ವತವಾಗಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಅಶೋಕ್ ಹೇಳಿದ್ದಾರೆ.