Home ಮುಖಪುಟ ಸುದ್ದಿ ಕಾಂಗ್ರೆಸ್- ಬಿಜೆಪಿ ಮಧ್ಯೆ ‘ನೀಟ್’ ವಾಗ್ಯುದ್ಧ

ಕಾಂಗ್ರೆಸ್- ಬಿಜೆಪಿ ಮಧ್ಯೆ ‘ನೀಟ್’ ವಾಗ್ಯುದ್ಧ

ಬೆಂಗಳೂರು, ಜೂ.೨೨: ಕಾಂಗ್ರೆಸ್ ಕಾರ್ಯಕ್ರಮದಿಂದಾಗಿ ‘ನೀಟ್’ ಮರುಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಾಲು ಸಾಲು ಪರೀಕ್ಷಾ ಹಗರಣಗಳ ಮೂಲಕ ದೇಶದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರ, ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದೇ ನಾವು ಭಾನುವಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಪೊಲೀಸರ ಜೊತೆ ಮುಂಚಿತವಾಗಿಯೇ ಚರ್ಚಿಸಿ, ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ ೧೦:೩೦ರ ವೇಳೆಗೆ ಕಾರ್ಯಕ್ರಮಕ್ಕೆ ಬರಬೇಕಿದ್ದ ಎಲ್ಲ ಬಸ್‌ಗಳು ಅರಮನೆ ಮೈದಾನವನ್ನು ತಲುಪಿದ್ದವು. ಆದರೂ ಕೆಲವು ಕಡೆ ತಪ್ಪುಗಳು ನಡೆದು ಸಂಚಾರ ದಟ್ಟಣೆಯಾಗಿರುವುದು ನಿಜ ಎಂದು ಒಪ್ಪಿಕೊಂಡರು.


ಒಂದು ವೇಳೆ ನಮ್ಮ ಕಾರ್ಯಕ್ರಮದಿಂದಾಗಿ ಯಾವೊಬ್ಬ ವಿದ್ಯಾರ್ಥಿಗಾದರೂ ನಿಜವಾಗಿಯೂ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎನ್ನುವುದಾದರೆ, ನಾನು ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಆ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆ ಎದುರಿಸಲು ಕಾಂಗ್ರೆಸ್ ಪಕ್ಷದಿಂದ ಎಲ್ಲಾ ರೀತಿಯ ಅಗತ್ಯ ಸಹಾಯ ಮತ್ತು ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ. ಈಗಾಗಲೇ ನಮ್ಮ ತಂಡ ಅಂತಹ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದೆ” ಎಂದು ಭರವಸೆ ನೀಡಿದರು. ಅಲ್ಲದೆ, ಪರೀಕ್ಷೆ ಬರೆದಿರುವುದಾಗಿ ಸ್ವತಃ ವಿದ್ಯಾರ್ಥಿಗಳೇ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರೂ, ಬಿಜೆಪಿ ನಾಯಕರು ಅವರಿಂದ ಬಲವಂತವಾಗಿ ಸುಳ್ಳು ಹೇಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಇನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಮೂರು ಬಾರಿ ನೀಟ್ ಪರೀಕ್ಷೆಯನ್ನು ಮುಂದೂಡಿದ್ದು,ಹತ್ತಾರು ಪ್ರಮುಖ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ನಿರಂತರವಾಗಿ ಸೋರಿಕೆಯಾಗುತ್ತಿವೆ. ೧೨ ವಿದ್ಯಾರ್ಥಿಗಳ ಆತ್ಮಹತ್ಯೆ: ಪರೀಕ್ಷಾ ಅಕ್ರಮ ಹಾಗೂ ಮಾನಸಿಕ ಒತ್ತಡ ತಾಳಲಾರದೆ ದೇಶದಲ್ಲಿ ಈಗಾಗಲೇ ೧೨ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಕನಿಷ್ಠ ಸಂತಾಪವನ್ನೂ ಸೂಚಿಸಿಲ್ಲ, ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿಲ್ಲ ಎಂದು ಕಿಡಿಕಾರಿದರು.


ಇದಲ್ಲದೆ, ಬಿಜೆಪಿ ಮೊದಲು ವಿದ್ಯಾರ್ಥಿಗಳ ಹಾಗೂ ದೇಶದ ಕ್ಷಮೆ ಕೇಳಲಿ. ಕಾಂಗ್ರೆಸ್ ಪಕ್ಷವು ಯಾವಾಗಲೂ ವಿದ್ಯಾರ್ಥಿಗಳ ಪರವಾಗಿಯೇ ಇರಲಿದ್ದು, ಅವರ ನ್ಯಾಯಯುತ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ಮೊದಲು ಮೋದಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದೇಶದ ಜನತೆಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.