
ಕಲಬುರಗಿ,ಜೂ.22-ಇದೇ ತಿಂಗಳು 28ರಂದು ಬಸವ ಕಲ್ಯಾಣದಲ್ಲಿ ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಮತ್ತು ಈ ಸಮಾವೇಶವನ್ನು ರದ್ದು ಪಡಿಸಬೇಕು ಎಂದು ಡಾ.ಅಂಬೇಡ್ಕರ್ ಅರಿವು ಉತ್ಸವ ಸಮಿತಿ ಅಧ್ಯಕ್ಷ ಹಣಮಂತ ಇಟಗಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಇತ್ತೀಚಿಗೆ ದೇಶದಲ್ಲಿ ಸಾಮಾಜಿಕ ಪರಿವರ್ತನ ಚಳುವಳಿಗಾರರನ್ನು ಹಾಗೂ ಅವರ ವಿಚಾರಗಳನ್ನು ಕಲುಷಿತಗೊಳಿಸುವ ಮತ್ತು ಹತ್ತಿಕ್ಕುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಜಾತಿ ರಹಿತ, ವರ್ಗ ರಹಿತ ಸಮ ಸಮಾಜದ, ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಪರಿವರ್ತನಾ ಚಳುವಳಿಯನ್ನ ಕಟ್ಟಿದ, ಬುದ್ದ, ಬಸವ, ಜ್ಯೋತಿಬಾ ಪುಲೆ, ಕನಕ ನಾಯಕರು, ಛತ್ರಪತಿ ಶಾಹು ಮಹಾರಾಜ್, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಸ್ವಾಮಿ ವಿವೇಕಾನಂದ, ವಿಶ್ವ ಮಾನವ ಸಂದೇಶ ಸಾರಿದ, ರಾಷ್ಟ್ರಕವಿ ಕುವೆಂಪು ಹಾಗೂ ಈ ದೇಶದ ಸರ್ವ ಜನಾಂಗದ ವಿಮೋಚನೆ ಮಾಡಿದ, ಈ ದೇಶದ ರಾಷ್ಟ್ರೀಯ ಗ್ರಂಥವಾದ ನಮ್ಮ ಸಂವಿಧಾನದ ವಿಚಾರಧಾರೆಗಳ ವಿರೋಧಿಗಳು ಗುಂಪುಗಳನ್ನು ಕಟ್ಟಿಕೊಂಡು, ಇತಿಹಾಸವನ್ನು ತಿರುಚುವ ಮೂಲಕ, ಪೊಳ್ಳು ಕತೆಗಳನ್ನು ಸಾಮಾನ್ಯ ಜನರಲ್ಲಿ ಬಿತ್ತಿ, ಸೌಹಾರ್ದತೆ, ಭಾವೈಕ್ಯತೆಯಿಂದ ಬದುಕನ್ನು ಕಟ್ಟಿಕೊಂಡ, ಶಾಂತಿ ಸಮೃದ್ಧಿಯ ನಾಡನ್ನು, ಕೋಮು ಅಗ್ನಿಕುಂಡಕ್ಕೆ ತಳ್ಳುವಂತಹ ಚಟುವಟಿಕೆಗಳು ನಡೆಯುತ್ತಿವೆ. ಈ ಭಾಗದ ಸರ್ವ ಸಮುದಾಯದ ಜನ, ವೈಚಾರಿಕವಾಗಿ ಮತ್ತು ಸಾಂವಿಧಾನಿಕವಾಗಿ ಇದನ್ನು ವಿರೋಧಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಯಾವ ಧರ್ಮ ಜಾತಿಯನ್ನು ಪೆÇೀಷಿಸುತಿತ್ತೋ, ಯಾವ ಧರ್ಮ ಪುರುಷ ಮತ್ತು ಮಹಿಳೆ ಎಂಬ ತಾರತಮ್ಯ ಮಾಡುತ್ತಿತ್ತು, ಯಾವ ಧರ್ಮ ನಾವು ಶ್ರೇಷ್ಠ, ನೀವು ಕನಿಷ್ಠ ಎಂದು ನಡೆದುಕೊಳ್ಳುತ್ತಿತ್ತೋ, ಯಾವ ಧರ್ಮ ಜಾತಿಗಳನ್ನ ಪೆÇೀಷಿಸುತಿತ್ತೋ,ಯಾವ ಧರ್ಮ ಶ್ರೇಣಿಕೃತ ಸಮಾಜವನ್ನು ನಿರ್ಮಿಸಿತ್ತೋ, ಯಾವ ಧರ್ಮ ಜನರಿಗೆ ಮೌಡ್ಯತೆಗಳನ್ನು ಬಿತ್ತಿ, ಮಾನಸಿಕ ಗುಲಾಮರನ್ನಾಗಿ ಮಾಡಿತ್ತೋ, ಅಂತಹ ಧರ್ಮದ ವಿರುದ್ಧ ಕ್ರಾಂತಿಯನ್ನು ಮಾಡುವ ಮೂಲಕ, ನಿಸರ್ಗ ಸತ್ಯವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದ ಸಾಮಾಜಿಕ ಪರಿವರ್ತನಾ ಶರಣ ಪರಂಪರೆಯ ಹೆಸರಿನಲ್ಲಿ ಇಂದು ಸಮಾವೇಶ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕ್ರಾಂತಿಕಾರಿ ಅಣ್ಣ ಬಸವಣ್ಣನವರನ್ನು ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಿಸುವ ಮೂಲಕ ಗೌರವವನ್ನು ನೀಡಿದೆ. ಸರ್ಕಾರವೇ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿದ ಅಣ್ಣ ಬಸವಣ್ಣನವರ ವಿಚಾರಗಳಿಗೆ, ಮಸಿ ಬಳಿಯುವಂತಹ ಕುತಂತ್ರ ನಡೆಸುವ ಯಾವುದೇ ಸಂಘ,ಸಂಸ್ಥೆ, ಹಾಗೂ ವ್ಯಕ್ತಿಗಳಾಗಲಿ ಅವರಿಗೆ, ಸಾಂವಿಧಾನಿಕವಾಗಿ ಶಿಕ್ಷಿಸುವ ಮೂಲಕ, ಸರ್ಕಾರವೇ ನೇರವಾಗಿ ಕ್ರಮವನ್ನು ಕೈಗೊಂಡು, ಸಾಮಾಜಿಕ ಸುಧಾರಣೆಯ ಸುಧಾರಕರ ಚಿಂತನೆಗಳನ್ನು ರಕ್ಷಿಸುವ, ಅವರಿಗೆ ಗೌರವ ನೀಡುವಂತಹ, ಪವಿತ್ರ ಕೆಲಸ ಮಾಡಬೇಕಾಗಿದೆ. ಮುಂದೆಯೂ ಕೂಡ, ಸಮಾಜ ಸುಧಾರಣೆಯ ಯಾವ ನಾಯಕರಿಗೂ ಮತ್ತು ಅವರ ವಿಚಾರಗಳಿಗೂ, ಧಕ್ಕೆ ತರುವಂತಹ ತಂತ್ರ, ಕುತಂತ್ರದ ಸಮಾವೇಶಗಳಿಗೆ, ಸರ್ಕಾರ ಪರವಾನಿಗೆಯನ್ನು ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಬಸವ ಕಲ್ಯಾಣದಲ್ಲಿ ಜೂನ್ 28ಕ್ಕೆ ನಡೆಯುವ ಸಮಾವೇಶಕ್ಕೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.


























