
ಕಲಬುರಗಿ,ಜೂ.22-ಮಹಾತ್ವಾಕಾಂಕ್ಷಿ ಜಿಲ್ಲೆ ಮತ್ತು ಭಾರತ ಸರ್ಕಾರದಿಂದ 371ನೇ (ಜೆ) ಸ್ಥಾನಮಾನ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅತ್ಯಂತ ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮನೀಷ್ ಜಾಜು, ಲಿಂಗರಾಜ ಸಿಂಗಾಪೂರ,ಉದಯ ಕುಮಾರ ಜೇವರ್ಗಿ, ಮಲ್ಲಿನಾಥ.ಕೆ.ಮಲ್ಲಿಕಾರ್ಜುನ ಬೋಸನೂರ್, ರೌಫ ಖಾದ್ರಿ, ಮುತ್ತಣ್ಣ ನಡಗೇರಿ,ಮಲ್ಲು ಮುಛಖೇಡ್ ,ಸಂಧ್ಯಾರಾಜ, ಶ್ರೀನಿವಾಸ ಕುಲಕರ್ಣಿ, ಶರಣು ಮಾಲಿ, ಮಹೇಂದ್ರ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಹಿಂದೆ ನಂಜುಂಡಪ್ಪ ವರದಿಯ ಪ್ರಕಾರ ಐಐಟಿ ರಾಯಚೂರು ಜಿಲ್ಲೆಗೆ ನೀಡಬೇಕೆಂದು ಅಧಿಕೃತ ವರದಿಯಲ್ಲಿ ನಿರ್ದೇಶಿಸಿದರೂ ಸಹ ಇದಕ್ಕೆ ಕ್ಯಾರೆ ಎನ್ನದೆ ಮುಂಬಯಿ ಕರ್ನಾಟಕದ ಪ್ರಭಾವಿ ನಾಯಕರು ತಮ್ಮ ಬಲವಾದ ರಾಜಕೀಯ ಇಚ್ಛಾಶಕ್ತಿ ಬಳಿಸಿಕೊಂಡು ರಾಯಚೂರಿಗೆ ಸಿಗಬೇಕಾದ ಐಐಟಿ ಧಾರವಾಡಕ್ಕೆ ಸ್ಥಳಾಂತರ ಮಾಡಿಸಿಕೊಂಡರು. ಇದರಿಂದ ಎಚ್ಚೆತ್ತುಕೊಂಡ ಕಲ್ಯಾಣ ಕರ್ನಾಟಕದ ಹೋರಾಟಗಾರರು ಅದರಲ್ಲೂ ವಿಶೇಷವಾಗಿ ರಾಯಚೂರಿನ ಹೋರಾಟಗಾರರು ಏಳು ಜಿಲ್ಲೆಗಳ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬೆಂಬಲದಿಂದ ರಾಯಚೂರು ಏಮ್ಸ್ ಹೋರಾಟ ಸಮಿತಿ ಮಾಡಿಕೊಂಡು ಸುಮಾರು 1500 ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿಕೊಂಡು ಬರುತ್ತಿದ್ದಾರೆ.
ಏಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಡಾ.ಶರಣ ಪ್ರಕಾಶ ಪಾಟೀಲರವರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಭೇಟಿ ಮಾಡಿ ಆರೋಗ್ಯ ಸಚಿವರಾದ ಮನಸುಖ ಮಾಂಡವೀಯರವರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ. ಈ ನಿಯೋಗದಲ್ಲಿ ರಾಯಚೂರು, ಕೊಪ್ಪಳ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ಸಚಿವರು,ಸಂಸದರು ,ಶಾಸಕರು, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಹೋರಾಟಗಾರರು ನಿಯೋಗಲ್ಲಿ ಇದ್ದರು.ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಕೇಂದ್ರಕ್ಕೆ ಆಗ್ರಹಿಸಿದೆ. ಅಷ್ಟೆ ಅಲ್ಲದೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಹ ಪ್ರಧಾನ ಮಂತ್ರಿಗಳಿಗೆ ಸಮಕ್ಷಮ ಭೇಟಿ ಮಾಡಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಭಾರತ ಮತ್ತು ಕರ್ನಾಟಕದ ಇತಿಹಾಸದಲ್ಲಿಯೆ ಒಂದು ಚಾರಿತ್ರಿಕ ಹೋರಾಟ ನಿರಂತರ ನಡೆದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರೈಲ್ವೆ ವಿಭಾಗ ರಚನೆ ಬಗ್ಗೆ ಆಗಲ್ಲಿ, ಬೃಹತ್ ಉದ್ದಿಮೆಗಳ ಸ್ಥಾಪನೆ ಸೇರಿದಂತೆ ನಿರಂತರವಾಗಿ ಹಿಂದುಳಿದ 371ನೇ (ಜೆ) ಕಲಂ ತಿದ್ದುಪಡಿ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಾಯಿ ಧೋರಣೆ ಮಾಡುತ್ತಿರುವುದಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ. ಏಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ಸ್ಥಾಪನೆ ಮಾಡಲು ಹೋರಾಟ ಸಮಿತಿ ಪ್ರಧಾನ ಮಂತ್ರಿಗಳಿಗೆ ಬಲವಾಗಿ ಒತ್ತಾಯಿಸಿದೆ.


























