Home ಜಿಲ್ಲೆ ಕಲಬುರಗಿ ಅಕ್ರಮ ಮದ್ಯ ಮಾರಾಟ:ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಅಕ್ರಮ ಮದ್ಯ ಮಾರಾಟ:ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಕಲಬುರಗಿ,ಜೂ.22-ನಗರದ ಸುನೀಲ ನಗರ ಫಿಲ್ಟರ್‍ಬೆಡ್ ಕಮಾನ್ ಹತ್ತಿರ ಹನುಮಾನ ದೇವಸ್ಥಾನದ ಎದರುಗಡೆ ಇರುವ ಖುಲ್ಲಾ ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಎಸ್‍ಐ ಕವಿತಾ ಚವ್ಹಾಣ್, ಸಿಬ್ಬಂದಿಗಳಾದ ಸಂಜೀವಕುಮಾರ, ರಾಜಕುಮಾರ, ರೇವಣಸಿದ್ದ, ಕೃಷ್ಣ ಅವರು ದಾಳಿ ನಡೆಸಿ ಇಬ್ಬರು ಮಹಿಳೆಯರು ಮೂವರನ್ನು ಬಂಧಿಸಿದ್ದಾರೆ.
ಚಂದ್ರಕಾಂತ ಪೂಜಾರಿ (49), ಕಮಲಾಬಾಯಿ ಗಾಡಿವಡ್ಡರ್ (50) ಮತ್ತು ಪುತಳಾಬಾಯಿ ಬಬಲಾದಿ (45) ಎಂಬುವವರನ್ನು ಬಂಧಿಸಿ 5040 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನ
ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿ ನಗರದ ಜಿಡಿಎ ಕಾಲೋನಿಗೆ ಹೋಗುವ ರಸ್ತೆಯಲ್ಲಿರುವ ಲಂಗೋಟಿ ಪೀರ್ ದರ್ಗಾ ಹತ್ತಿರದ ಸಾರ್ವಜನಿಕ ರಸ್ತೆ ಮೇಲೆ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಮೃತ್ಯುಂಜಯ, ಪ್ರದೀಪ್, ಅಶೋಕ, ನಾಗರಾಜ ಅವರು ದಾಳಿ ನಡೆಸಿ ಶಿವಕುಮಾರ ಕೋಲಕುಂದಿ (44) ಎಂಬಾತನನ್ನು ಬಂಧಿಸಿ 5,030 ರೂ.ನಗದು ಮತ್ತು 1 ಸಾವಿರ ರೂ.ಮೌಲ್ಯದ ಮೊಬೈಲ್, ಒಂದು ಬಾಲ್ ಪೆನ್ ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ದಾಖಲಾತಿ ಕಳವು
ನಗರದ ನಯಾ ಮೊಹಲ್ಲಾದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದಾಖಲಾತಿಗಳು ಕಳೆದಿವೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶಹಜಹಾನ್ ಬೇಗಂ ಅವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಏ.14 ರಿಂದ ಮೇ.28 ರವರೆಗೆ ಶಾಲೆಗೆ ರಜೆ ಇದ್ದುದ್ದರಿಂದ ಶಾಲೆಯ ಸಿಬ್ಬಂದಿ ರಜೆ ಮೇಲೆ ಹೋಗಿದ್ದು, ಮೇ.29 ರಂದು ಮರಳಿ ಶಾಲೆಗೆ ಬಂದು ನೋಡಿದಾಗ ಶಾಲೆಯಲ್ಲಿದ್ದ 1985 ರಿಂದ 1999, 2002 ರಿಂದ 2005, 2008 ರಿಂದ 2011 ಮತ್ತು 2013 ರಿಂದ 2022ರವರೆಗಿನ ರಜಿಸ್ಟರ್‍ಗಳು ಕಳವಾಗಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.