
ಡಿಕೆಶಿಗೆ ಎಚ್‌ಡಿಕೆ ಸವಾಲು
ಬೆಂಗಳೂರು,ಜೂ.೨೨: ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ, ಅಲ್ಲಿನ ಸಣ್ಣ ಸಣ್ಣ ರೈತರು ಭೂಮಿ ಕೊಡಲು ಒಪ್ಪಿದ್ದಾರಾ ಇಲ್ಲವಾ ಎಂದು ಸಾರ್ವಜನಿಕವಾಗಿಯೇ ರೈತರನ್ನು ಕೇಳೋಣ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ.
ಮಾಜಿ ಶಾಸಕ ಮಾಗಡಿ ಮಂಜುನಾಥ್ ಹಾಗೂ ಜೆಡಿಎಸ್ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಅಂದಿನ ಸದನದ ನಡಾವಳಿಗಳ ಪ್ರತಿಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ನಾಯಕರ ಇಬ್ಬಂದಿ ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
೨೦೦೬ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ೫ ಕಡೆ ಟೌನ್‌ಶಿಪ್ ಯೋಜನೆ ಘೋಷಿಸಿದ್ದು ನಿಜ. ಆದರೆ ೨೦೦೭ರ ಜುಲೈ ಅಧಿವೇಶನದಲ್ಲಿ ಇದೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ’ಇದು ಫಲವತ್ತಾದ ಭೂಮಿ, ರೈತರು ಭೂಮಿ ಕೊಡಬಾರದು, ಇದೊಂದು ದೊಡ್ಡ ದಂಧೆ, ರಿಯಲ್ ಎಸ್ಟೇಟ್ ಮಾಫಿಯಾ’ ಎಂದು ಸದನದಲ್ಲಿ ಭಾಷಣ ಮಾಡಿದ್ದರು. ರೈತರ ಹಿತದೃಷ್ಟಿಯಿಂದ ೨೦೦೭ರ ಆಗಸ್ಟ್ ೧ ರಂದು ನಾನು ಯೋಜನೆಯನ್ನು ಕೈಬಿಡುತ್ತಿದ್ದೇನೆ ಎಂದು ಸದನದಲ್ಲೇ ಘೋಷಿಸಿದ್ದೆ. ಆ ನಂತರ ಇದರಲ್ಲಿ ನನ್ನ ಪಾತ್ರವೇ ಇಲ್ಲ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
“ನನ್ನನ್ನು ಯೋಜನೆಯ ಪಿತಾಮಹ ಎನ್ನುವ ಇವರು ಇಷ್ಟು ದಿನ ಏನು ಮಾಡುತ್ತಿದ್ದರು? ಈ ಯೋಜನೆಗೆ ಸಂಬಂಧಿಸಿದಂತೆ ರೈತರ ಭೂಸ್ವಾಧೀನಕ್ಕೆ ಇದುವರೆಗೆ ಆದೇಶ ಆಗಿದ್ದೇ ಇಲ್ಲ. ೨೦೨೫ರ ಮಾರ್ಚ್ ೧೨ ರಂದು ಮೊದಲ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದೇ ಡಿ.ಕೆ. ಶಿವಕುಮಾರ್. ಅಷ್ಟೇ ಅಲ್ಲದೆ, ಇತ್ತೀಚೆಗೆ ಜೂನ್ ೧೦ ರಂದು ಈ ಸರ್ಕಾರ ಟೌನ್‌ಶಿಪ್‌ಗೆ ಫೈನಲ್ ನೋಟಿಫಿಕೇಶನ್ ಮಾಡಿದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ?” ಎಂದು ಹೆಚ್‌ಡಿಕೆ ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಕೇಂದ್ರ ಸಚಿವರು, “ಈ ಟೌನ್‌ಶಿಪ್ ಯೋಜನೆಯ ಅಧಿಕೃತ ಕೆಲಸಗಳು ಡಿಸಿ ಕಚೇರಿಯಲ್ಲಿ ನಡೆಯುತ್ತಿಲ್ಲ. ಬದಲಿಗೆ ನಾಗರಭಾವಿ ಬಳಿಯ ಒಂದು ಬಾಡಿಗೆ ಮನೆಯಲ್ಲಿ ಪುಡಾರಿಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರನ್ನು ಕೂರಿಸಿಕೊಂಡು ದಂಧೆ ನಡೆಸಲಾಗುತ್ತಿದೆ. ಭೂಮಿ ಕೊಡಲ್ಲ ಎಂದು ೪,೫೦೦ ರೈತರು ಆಕ್ಷೇಪಣಾ ಅರ್ಜಿ ಸಲ್ಲಿಸಿದರೂ ಒಂದಕ್ಕೂ ಇವರು ಉತ್ತರಿಸಿಲ್ಲ. ಬದಲಾಗಿ ಡಿಸಿ ಕಚೇರಿಗೆ ರೈತರನ್ನು ಕರೆಸಿ ರೌಡಿಗಳ ಕೈಯಲ್ಲಿ ಧಮ್ಕಿ ಹಾಕಿಸಲಾಗುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.
ಶೇ. ೫೦ ಪರಿಹಾರ ಮತ್ತು ೫೦% ಅಭಿವೃದ್ಧಿಪಡಿಸಿದ ಜಾಗ ನೀಡುತ್ತೇವೆ ಎಂಬ ಸರ್ಕಾರದ ಭರವಸೆಯನ್ನು ತಳ್ಳಿಹಾಕಿದ ಹೆಚ್‌ಡಿಕೆ, “ಇದೇ ನೈಸ್ (ಓIಅಇ) ಕಂಪನಿ ಯೋಜನೆ ಬಂದು ೩೦ ವರ್ಷಗಳಾದರೂ ಇನ್ನು ೪,೫೦೦ ರೈತರಿಗೆ ಸೈಟ್ ಕೊಟ್ಟಿಲ್ಲ. ನೈಸ್ ಕಂಪನಿಯ ಪಿತಾಮಹ ಡಿ.ಕೆ. ಶಿವಕುಮಾರ್. ನೈಸ್ ಯೋಜನೆಯ ಜಮೀನು ಡಿನೋಟಿಫಿಕೇಶನ್ ಮಾಡಿದಾಗ ನೀವೇನು ಜೈಲಿಗೆ ಹೋದ್ರಾ ಡಿಕೆಶಿಯವರೇ? ಸತ್ತವರ ಜಮೀನನ್ನು ’ರೀ ಡೂ’ ಮಾಡಿದರೆ ಮಾತ್ರ ಜೈಲಿಗೆ ಹೋಗ್ತಾರೆ. ಬಹುಶಃ ಆ ಭಯ ನಿಮಗಿರುವಂತಿದೆ” ಎಂದು ವ್ಯಂಗ್ಯವಾಡಿದರು.
ಕೊನೆಯದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ ಹೆಚ್‌ಡಿಕೆ, “೨೦೨೮ಕ್ಕೆ ಡಿಜೆ-ಬಿಕೆ ಸರ್ಕಾರ ಬರುತ್ತೆ ಅಂತ ಭಾಷಣ ಮಾಡ್ತೀರಾ, ಆದರೆ ಬೆಂಗಳೂರಿನ ರಸ್ತೆಗಳನ್ನು ನೋಡಿದರೆ ಜನ ಉಗಿಯುತ್ತಿದ್ದಾರೆ. ಇವರಿಗೆ (ಡಿಕೆಶಿಗೆ) ಸ್ವಲ್ಪ ಬುದ್ಧಿ ಹೇಳಿ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ನಿಮಗೆ ತಕ್ಕ ಉತ್ತರ ಕೊಡುವ ಕಾಲ ಅತ್ಯಂತ ಹತ್ತಿರದಲ್ಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.





























