
ಬೆಂಗಳೂರು,ಅ.೨೮- ಕರ್ನಾಟಕ ವಿಧಾನಪರಿಷತ್ನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಯಭೇರಿ ಬಾರಿಸಿದೆ. ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ಗೆ ಹಿನ್ನಡೆ ಉಂಟುಮಾಡಿದ್ದಾರೆ. ಈ ಫಲಿತಾಂಶ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮೂರು ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮುಖಭಂಗವಾಗಿದೆ. ಪರಿಷತ್ ಚುನಾವಣೆ ಗೆಲುವು ಮೈತ್ರಿಕೂಟದ ನಾಯಕರಲ್ಲಿ ಹೊಸ ಹುರುಪು ಮೂಡಿಸಿದೆ.ಗೆಲುವಿನ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ನ ಎ.ಪಿ. ರಂಗನಾಥ್, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶೀಲ್ ಜಿ. ನಮೋಶಿ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ. ಸಂಕನೂರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ನ ಹಾಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ವಿರುದ್ಧ ಅವರು ಜಯಗಳಿಸಿದ್ದಾರೆ. ರಂಗನಾಥ್ ೧೦,೮೧೦ ಮತಗಳನ್ನು ಪಡೆದರೆ, ಪುಟ್ಟಣ್ಣ ೯,೯೦೨ ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ರಂಗನಾಥ್ ೯೦೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೆಲುವು ಖಚಿತವಾಗುತ್ತಿದ್ದಂತೆ ರಂಗನಾಥ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಚುನಾವಣಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರಿಂದ ಗೆಲುವಿನ ಪ್ರಮಾಣಪತ್ರ ಸ್ವೀಕರಿಸಿದರು.ಅಕ್ಟೋಬರ್ ೨೩ ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು ೨೭,೪೦೫ ಮತದಾರರ ಪೈಕಿ ೨೨,೪೬೮ ಮಂದಿ ಮತ ಚಲಾಯಿಸಿದ್ದು, ಶೇ. ೮೧.೯೮ರಷ್ಟು ಮತದಾನವಾಗಿತ್ತು
ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್ಗೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ, ಹಾಲಿ ಪರಿಷತ್ ಸದಸ್ಯ ಶಶೀಲ್ ನಮೋಶಿ ಜಯಗಳಿಸಿದ್ದಾರೆ. ಕಾಂಗ್ರೆಸ್ನ ಶರಣಪ್ಪ ಮಟ್ಟೂರ್ ವಿರುದ್ಧ ನಮೋಶಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಶಶೀಲ್ ಜಿ. ನಮೋಶಿ ೧೫,೫೯೬ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, ಶರಣಪ್ಪ ಮಟ್ಟೂರು ೧೨,೨೯೯ ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ನಮೋಶಿ ೩,೨೯೭ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲಿಸಿದ್ದಾರೆ.ಈ ಗೆಲುವಿನೊಂದಿಗೆ ಅವರು ಸತತ ಮೂರನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದಂತಾಗಿದೆ.ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಂಕನೂರ ಅವರು, ಅಂತಿಮ ಸುತ್ತಿನಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿ ಗೆಲುವಿನ ನಗೆ ಬೀರಿದರು.ಕೊನೆಯ ಸುತ್ತಿನಲ್ಲಿ ಎಣಿಕೆಯಾದ ಒಟ್ಟು ೩,೬೯೦ ಮತಗಳ ಪೈಕಿ ಬಿಜೆಪಿಯ ಎಸ್.ವಿ. ಸಂಕನೂರ ೧,೭೯೧ ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ೧,೧೮೮ ಮತಗಳನ್ನು ಗಳಿಸಿದರು. ಸಂಕನೂರು ೩೩,೭೧೧ ಮತಗಳನ್ನು ಪಡೆದರೆ, ಮೋಹನ್ ಲಿಂಬಿಕಾಯಿ ೨೪,೩೮೮ ಮತಗಳನ್ನು ಗಳಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಫಲಿತಾಂಶ ಬಿಜೆಪಿಗೆ ಮತ್ತೊಂದು ಮಹತ್ವದ ಗೆಲುವು ತಂದುಕೊಟ್ಟಿದೆ.
ಮೂರನೇ ಬಾರಿಗೆ ಕ್ಷೇತ್ರದ ಮತದಾರರು ಎಸ್.ವಿ. ಸಂಕನೂರ ಅವರ ಕೈಹಿಡಿದಿದ್ದು, ಗೆಲುವಿನ ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ವಿರುದ್ಧ ಗೆಲುವು ಸಾಧಿಸಿದ್ದಾರೆ.ತೀವ್ರ ಕುತೂಹಲ ಕೆರಳಿಸಿದ್ದ ಈ ಹಣಾಹಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಅವರನ್ನು ಬರೋಬ್ಬರಿ ೨೩,೦೯೮ ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿದರು. ಕೆ.ಎಂ. ಸುರೇಶ್ ೬೬,೦೨೦ ಮತ ಪಡೆದರೆ ಶಶಿ ಹುಲಿಕುಂಟೆಗೆ ೪೨,೯೨೨ ಮತಗಳು ಬಿದ್ದವು. ೨೦,೦೭೬ ಮತಗಳನ್ನು ತಿರಸ್ಕೃತಗೊಳಿಸಲಾಗಿದೆ.
ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಮತ ಎಣಿಕೆಯ ಆರಂಭಿಕ ಸುತ್ತುಗಳಿಂದಲೇ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದ ಕೆ.ಎಂ. ಸುರೇಶ್ ಅವರು ಅಂತಿಮವಾಗಿ ಸ್ಪಷ್ಟ ಬಹುಮತದೊಂದಿಗೆ ವಿಜಯಶಾಲಿಯಾದರು. ಈ ಬಾರಿಯ ಚುನಾವಣೆಯಲ್ಲಿ ಬರೋಬ್ಬರಿ ೨೦,೦೭೬ ಮತಗಳು ಅಸಿಂಧುಗೊಂಡಿರುವುದು ಗಮನಾರ್ಹವಾಗಿದೆ. ಎನ್ಡಿಎ ಅಭ್ಯರ್ಥಿಯ ಗೆಲುವು ಅಧಿಕೃತವಾಗುತ್ತಿದ್ದಂತೆ ಬಿಜೆಪಿ ಹಾಗೂ ಮೈತ್ರಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನಿನ್ನೆ ಪ್ರಾರಂಭವಾದ ಒಟ್ಟು ೧೦ ಸುತ್ತುಗಳ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಪೂರ್ಣಗೊಂಡಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶಶಿ ಹುಲಿಕುಂಟೆ ಅವರು ೪೨,೯೨೨ ಮತಗಳನ್ನು ಪಡೆದರೆ, ಸರ್ವ ಜನತಾ ಪಾರ್ಟಿ ಅಭ್ಯರ್ಥಿಯಾದ ಸಿ.ಜಿ. ಪಾಟೀಲ್ ೧೬೨ ಮತ, ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ ೧೫೬, ಚಿಕ್ಕರಾಜು ಎಸ್. ವೈ ಯಾದವ್ ೩೭೭, ಲಕ್ಷ್ಮಯ್ಯ. ಆರ್ ೩೮೭, ಲಕ್ಷ್ಮಿಕಾಂತ ಎಸ್. ಯಾದವ್ ೩೬೯, ಶಶಿ ಹುಲಿಕಟ್ಟಿ ೪೪೯, ಸೈಯದ್ ಅಫಕ್ ಅಹ್ಮದ್ ೧೧೩ ಹಾಗೂ ಅಡ್ವಕೇಟ್ ಬಾರಿದ್ ಅವರು ೧,೧೦೭ ಮತಗಳನ್ನು ಪಡೆದರು. ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು ೧,೧೨,೦೬೨ ಮತಗಳು ಮಾನ್ಯವಾಗಿದ್ದು, ೨೦,೦೭೬ ಮತಗಳು ಅಮಾನ್ಯ ಎಂದು ತಿರಸ್ಕೃತಗೊಂಡಿದೆ
ಒಟ್ಟಾರೆ, ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಎನ್ಡಿಎಗೆ ರಾಜಕೀಯ ಬಲ ತುಂಬಿದೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಈ ಫಲಿತಾಂಶ ಮಹತ್ವದ್ದಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿಶ್ಲೇಷಿಸಿದ್ದಾರೆ.
ಬಾಕ್ಸ್
ಸತ್ಯಮೇವ ಜಯತೇ- ಹೆಚ್ ಡಿಕೆ ಪೋಸ್ಟ್
ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ಕುರಿತು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸತ್ಯಮೇವ ಜಯತೇ ಎಂದು ಪೋಸ್ಟ್ ಮಾಡಿರುವ ಅವರು,ಸುಳ್ಳು, ದುರಾಡಳಿತ, ಹಣಬಲ ಮತ್ತು ತೋಳ್ಬಲಗಳು ಸೋತಿವೆ ಎಂದು ಹೇಳಿದ್ದಾರೆ. ಈ ಚುನಾವಣೆ ಹೊಸ ಭರವಸೆಯ ಸೂರ್ಯೋದಯಕ್ಕೆ ನಾಂದಿ ಹಾಡಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
೨೦೨೮ರ ಚುನಾವಣೆಗೆ ಸ್ಪಷ್ಟ ದಿಕ್ಸೂಚಿ
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಲುಷಿತಗೊಳಿಸಲು ಯತ್ನಿಸುತ್ತಿರುವ ಕ್ಷುದ್ರ ರಾಜಕೀಯ ವ್ಯವಸ್ಥೆಗೆ ತಕ್ಕ ಉತ್ತರ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಹಾಗೂ ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರ್ಕಾರವನ್ನು ಧಿಕ್ಕರಿಸಿದ್ದಾರೆ. ಈ ಚುನಾವಣಾ ಫಲಿತಾಂಶ ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಪ್ಪುಮಸಿ ಬಳಿದು, ದಾಳಿ ನಡೆಸಲು ಹುನ್ನಾರ ನಡೆಸುತ್ತಿರುವ ಶಕ್ತಿಗಳ ವಿರುದ್ಧ ಜನತೆ ನೀಡಿರುವ ತೀರ್ಪಾಗಿದೆ, ಜೊತೆಗೆ, ಕರ್ನಾಟಕದಲ್ಲಿ ನಡೆಯಲಿರುವ ೨೦೨೮ರ ಚುನಾವಣೆಗೆ ನೀಡಿರುವ ಸ್ಪಷ್ಟ ದಿಕ್ಸೂಚಿಯಾಗಿದೆ. ಮತ ಕಳವು, SIಖ ವಿರೋಧದ ಹೆಸರಿನಲ್ಲಿ ಚುನಾವಣಾ ವ್ಯವಸ್ಥೆಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ಸಿಗರಿಗೆ ನೀಡಿದ ದಿಟ್ಟ ಉತ್ತರವೂ ಆಗಿದೆ ಎಂದಿದ್ದಾರೆ.
ಇವಿಎಂ ಅನುಮಾನಿಸುತ್ತಿದ್ದ ಬ್ಯಾಲೆಟ್ ಮತದಾನವನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ಗೆ ಮತದಾರರು ಪ್ರತಿಕ್ರಿಯಿಸಿರುವ ಪರಿ ನೀವು ಯಾವ ಮಾರ್ಗದಲ್ಲಿಯೇ ಬಂದರೂ ಇದೇ ನಮ್ಮ ಉತ್ತರ ಎನ್ನುವ ರೀತಿಯಲ್ಲಿದೆ ಎಂದು ತಿಳಿಸಿದ್ದಾರೆ.
























