Home ಜಿಲ್ಲೆ ಉತ್ತಮ ಪ್ರಜೆಯಾಗಲು ಕಾನೂನು ಅರಿವು ಅಗತ್ಯ: ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ

ಉತ್ತಮ ಪ್ರಜೆಯಾಗಲು ಕಾನೂನು ಅರಿವು ಅಗತ್ಯ: ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ

ಬೀದರ್: ‘ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಯಾಗಬೇಕೆಂದರೆ ಅವರು ಗುಣಾತ್ಮಕ ಶಿಕ್ಷಣ ಪಡೆಯುವುದರೊಂದಿಗೆ ಕಾನೂನನ್ನು ಸರಿಯಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಘವೇಂದ್ರ ಉಪಾಧ್ಯೆ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಸುರಕ್ಷಿತ ಬಾಲ್ಯ ಅಭಿಯಾನ’ ಅಂಗವಾಗಿ ನಗರದ ಮಾಮನಕೇರಿಯಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು – ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾನೂನಿನ ಮುಂದೆ ಎಲ್ಲರು ಸಮಾನರು, ಪ್ರತಿಯೊಬ್ಬರು ಕಾನೂನಿಗೆ ಬದ್ಧರಾಗಿರಬೇಕು. ಕಾನೂನನ್ನು ಮೀರಿ ಯಾವುದೇ ರೀತಿಯ ಕಾರ್ಯಗಳನ್ನು ಕೈಗೊಳ್ಳಬಾರದು. ನಮ್ಮಿಂದ ಯಾವುದೇ ರೀತಿಯ ಅಪರಾಧವಾಗಬಾರದು ಎಂದರೆ ಮೊದಲು ನಾವು ಪ್ರತಿಯೊಂದು ಕಾನೂನುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಕಾರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಕೈಗೊಂಡಾಗ ಮಾತ್ರ ಉತ್ತಮ ಹೆಸರು ಗಳಿಸಲು ಸಾಧ್ಯವಿದೆ’ ಎಂದು ತಿಳಿಸಿದರು.
‘ಜ್ಞಾನ ಬದುಕಿನ ದೊಡ್ಡ ಆಸ್ತಿಯಾಗಿದೆ. ಉತ್ತಮ ಜ್ಞಾನ ಸಂಪಾದನೆ ಮಾಡಿದವರಿಗೆ ಜಗತ್ತಿನಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಶ್ರಮಪಡಬೇಕು. ಪ್ರಸ್ತುತ ಮೊಬೈಲ್ ದುರ್ಬಳಕೆಯಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಮೊಬೈಲ್ ಒಳ್ಳೆಯ ಕಾರ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
‘ವಿದ್ಯಾರ್ಥಿಗಳ ಬಾಲ್ಯದ ದಿನಗಳು ಉತ್ತಮ ಅನುಭವದೊಂದಿಗೆ ಕಳೆಯಬೇಕೆ ಹೊರತು ಕೆಟ್ಟ ಅನುಭವಗಳಿಂದಲ್ಲ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿದೆ. ಮಕ್ಕಳಿಗೆ ಯಾವುದೇ ಕೆಲಸಕ್ಕೆ ಕಳುಹಿಸಿಕೊಡದೆ ಅವರಿಗೆ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯವಾಗಿದೆ. ಒಂದು ವೇಳೆ ಅಪ್ರಾಪ್ತ ಮಕ್ಕಳಿಗೆ ಶಾಲೆಗೆ ಕಳುಹಿಸದೆ ಕೆಲಸಕ್ಕೆ ಕಳುಹಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ’ ಎಂದು ಹೇಳಿದರು.
‘ಪ್ರಸ್ತುತ ಸಂದರ್ಭದಲ್ಲಿ ಮಕ್ಕಳನ್ನು ಸಂರಕ್ಷಣೆ ಮಾಡಬೇಕಾದವರಿಂದಲೇ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾನೂನಿನ ಬಗ್ಗೆ ತಿಳಿವಳಿಕೆ ಪಡೆದವರು ಸಹ ಬಾಲ ಕಾರ್ಮಿಕ, ಬಾಲ್ಯ ವಿವಾಹಗಳು ನಡೆಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪೆÇೀಕ್ಸೊ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಅಷ್ಟೇ ಸೀಮಿತಿವಾಗಿಲ್ಲ. ಈ ಕಾಯ್ದೆಯಡಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಗಂಡು ಮಕ್ಕಳು ಸಹ ನ್ಯಾಯವನ್ನು ಪಡೆಯಬಹುದು. ಮಕ್ಕಳ ಮೇಲೆ ದೌರ್ಜನ್ಯ ನಡೆಯುವ ಕೃತ್ಯ ಕಂಡುಬಂದರೆ ಕೂಡಲೇ 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜಗೀರ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ ದೋಭೆ ಅವರು ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಹಾಡಿದರು.
ತಾಲ್ಲೂಕು ಪಂಚಾಯಿತಿ ಪಿ.ಎಂ. ಪೆÇೀಷಣ ಅಭಿಯಾನ ಸಹಾಯಕ ನಿರ್ದೇಶಕರಾದ ಜಾಕೀರ್ ಹುಸೇನ್ ದೊಡ್ಡಮನಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ತಾನಾಜಿ ಕಾರಬಾರಿ, ಕಾನೂನು ಅರಿವು-ನೆರವು ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಹೈದರ್ ಅಲಿ ಸೌದಾಗರ್, ಬಿಆರ್‍ಸಿ ಅಶೋಕ, ಗಾದಗಿ ಸಮೂಹ ಸಂಪನ್ಮೂಲ ವ್ಯಕ್ತಿ ಇಲೇಶಕುಮಾರ ಸೋನಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶಪಾಲರಾದ ಚನ್ನವೀರ ಪಾಟೀಲ್, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ ಉಪಸ್ಥಿತರಿದ್ದರು. 9ನೇ ತರಗತಿ ವಿದ್ಯಾರ್ಥಿಗಳಾದ ಸಾಕ್ಷಿ ಮತ್ತು ಸ್ಪರ್ಶಾ ನಿರೂಪಿಸಿದರು. 8ನೇ ತರಗತಿ ವಿದ್ಯಾರ್ಥಿನಿ ಅನನ್ಯ ಸ್ವಾಗತಿಸಿದರು. ವೈಷ್ಣವಿ ವಂದಿಸಿದರು.