
ಕಲಬುರಗಿ,ನ.19-ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಡಿ.12 ರಂದು ರಾಷ್ಟ್ರೀಯ ಲೋಕ್ ಅದಾಲತ್ನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ತಿಳಿಸಿದರು.
Àಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಎ.ಡಿ.ಆರ್.ಕಟ್ಟಡದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಈ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ಕಲಬುರಗಿ ಮತ್ತು ಕಲಬುರಗಿ ಜಿಲ್ಲೆಗೆ ಒಳಪಟ್ಟ ತಾಲ್ಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದು. ಜಿಲ್ಲೆಯ ಎಲ್ಲಾ ಕಕ್ಷಿದಾರರು, ಸಾರ್ವಜನಿಕರು ಈ ಲೋಕ್ ಅದಾಲತ್ನ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವಂತೆ ಮತ್ತು ಲೋಕ್ ಅದಾಲತ್ನ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದರು.
ಕಳೆದ ಬಾರಿ ಸೆಪ್ಟೆಂಬರ್ನಲ್ಲಿ ಸಾಕಷ್ಟು ಪ್ರಕರಣಗಳನ್ನು ಲೋಕ್ ಅದಾಲತ್ನಲ್ಲಿ ಇತ್ಯರ್ಥಗೊಳಿಸಲಾಗಿತ್ತು. ಲೋಕ್ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ರಾಜಿ ಸಂಧಾನದ ಮೂಲಕ ಲೋಕ್ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಡಿಸಿಕೊಂಡು ಸಾರ್ವಜನಿಕರು ಮತ್ತು ಕಕ್ಷಿದಾರರು ಲಾಭ ಪಡೆಯಬೇಕೆಂದು ಅವರು ಮನವಿ ಮಾಡಿದರು.
ಲೋಕ್ ಅದಾಲತ್ನಲ್ಲಿ ಪೆಂಡಿಂಗ್ ಸಿವ್ಹಿಲ್ ವ್ಯಾಜ್ಯಗಳು, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು, ಚೆಕ್ ಅಮಾನ್ಯ ಪ್ರಕರಣಗಳನ್ನು, ಬ್ಯಾಂಕ್ ಸಾಲ ವಸೂಲಿ ಪ್ರಕರಣಗಳನ್ನು, ಮೋಟಾರು ವಾಹನ ಅಪಘಾತ ಪರಿಹಾರ ಕೇಳಿದ ಪ್ರಕರಣಗಳನ್ನು, ಕಾರ್ಮಿಕ ವ್ಯಾಜ್ಯಗಳನ್ನು, ಕೌಟುಂಬಿಕ ನ್ಯಾಯಾಲಯದಲ್ಲಿನ ಕೆಲವು ಪ್ರಕರಣಗಳನ್ನು ಮತ್ತು ಅಮಲ್ಜಾರಿ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಲೋಕ ಅದಾಲತ್ನಲ್ಲಿ ಉಭಯ ಪಕ್ಷಗಾರರಿಗೆ ರಾಜಿ ಮಾಡಿಕೊಳ್ಳಲು ನ್ಯಾಯಾಲಯಗಳಿಂದ ಮಾರ್ಗದರ್ಶನ ನೀಡಲಾಗುವುದು. ಲೋಕ ಅದಾಲತ್ನಲ್ಲಿ ಹೊರಡಿಸುವ ಅವಾರ್ಡ್ ನ್ಯಾಯಾಲಯದಲ್ಲಿ ಕೊಡುವ ತೀರ್ಪಿನಷ್ಟು ಪರಿಣಾಮಕಾರಿಯಾಗಿರುತ್ತದೆ ಮತ್ತು ಅದರ ವಿರುದ್ಧ ಯಾವದೇ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಲೋಕ ಅದಾಲತ್ನಲ್ಲಿ ನೀವು ವಕೀಲರ ಮುಖಾಂತರ ಅಥವಾ ನೀವೇ ನೇರವಾಗಿ ಭಾಗವಹಿಸಬಹುದು ಮತ್ತು ಬೇರೆ ಪ್ರದೇಶದಲ್ಲಿದ್ದರೆ ಆನ್ಲೈನ್ ಮೂಲಕ ಭಾಗವಹಿಸಬಹುದು. ಸೌಹಾರ್ದಯುತವಾಗಿ ಪ್ರಕರಣಗಳನ್ನು ಇತ್ಯರ್ಥಗೊಳ್ಳುವುದರಿಂದ ಉತ್ತಮ ಬಾಂಧವ್ಯ ಉಳಿಯುವುದರ ಜೊತೆಗೆ ನೆಮ್ಮದಿಯು ಸಹ ಉಳಿಯಬಹುದು ಎಂದರು.
ಲೋಕ ಅದಾಲತ್ ನಲ್ಲಿ ಎಲ್ಲ ರೀತಿಯ ವ್ಯಾಜ್ಯಪೂರ್ವ ಪ್ರಕರಣಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯಲ್ಲಿ ಸಂಧಾನದದ ಮುಖೇನ ಇತ್ಯರ್ಥಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶವಿದೆ ಎಂದು ತಿಳಿಸಿದ ಅವರು, ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಪೂರ್ಣವಾಗಿ ಹಿಂದಿರುಗಿಸಲಾಗುವುದು. ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳಿಗೆ ಮೇಲ್ಮನವಿಯ ಅವಕಾಶವಿರುವುದಿಲ್ಲ. ಈ ರೀತಿಯ ಹಲವು ಲಾಭ ಕೊಡುವ ಲೋಕ್ ಅದಾಲತ್ನಲ್ಲಿ ಸಾರ್ವಜನಿಕರು ಮತ್ತು ಕಕ್ಷಿದಾರರು ಭಾಗವಹಿಸಿ ತಮ್ಮ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ದೂರವಾಣಿ ಸಂಖ್ಯೆ: 08472-253370) ಅಥವಾ ಜಿಲ್ಲೆಯಲ್ಲಿರುವ ಯಾವುದೇ ತಾಲ್ಲೂಕು ಕಾನೂನು ಸೇವಾ ಸಮತಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.



















