Home ಜಿಲ್ಲೆ ಬೆಂಗಳೂರು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ; ಇಕ್ಬಾಲ್ ಹುಸೇನ್

ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ; ಇಕ್ಬಾಲ್ ಹುಸೇನ್

ರಾಮನಗರ,ಸೆ.೦೮:ರಾಮನಗರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನಮ್ಮ ಧ್ಯೇಯವಾಗಿದ್ದು,ಸಾರಿಗೆ ಇಲಾಖೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ೨.೫ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.


ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಆವರಣದಲ್ಲಿ ೨.೫ಕೋಟಿ ವೆಚ್ಚದ ಪಾರ್ಕ್ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಾರ್ವಜನಿಕರ ಮನೆ ಬಾಗಿಲಿಗೆ ತ್ವರಿತಗತಿಯಲ್ಲಿ ಸೇವೆಯನ್ನು ಒದಗಿಸಲು ಪ್ರಜಾ ಸೇವೆ ಇಲಾಖೆ ಸೃಷ್ಟಿಸಲಾಗಿದೆ ಎಂದು ಹೇಳಿದರು.


ಸಾರ್ವಜನಿಕರಿಗೆ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ೨.೫ ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ, ಕಾಂಪೌಂಡ್ ಮತ್ತು ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ.೨ ಕೋಟಿ ರೂಪಾಯಿ ಹಣವನ್ನ ನೀಡಲಾಗಿದ್ದು, ಈಗಾಗಲೇ ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ. ಪಾರ್ಕ್, ಕಾಂಪೌಂಡ್ ನಿರ್ಮಾಣ ಕೆಲಸ ಆಗಬೇಕು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲು ತಿಳಿಸಲಾಗಿದೆ. ಕಚೇರಿಗೆ ಆಗಮಿಸುವ ಸಾರ್ವಜನಿಕರು ಕುಳಿತುಕೊಳ್ಳಲು ನೆರಳಿನಡಿ ಆಸನಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದರು.


ಸಾರಿಗೆ ಇಲಾಖೆ ಬಹಳ ಮುಖ್ಯವಾದಂತಹ ಒಂದು ಇಲಾಖೆ. ಜಿಲ್ಲೆಯಲ್ಲಿರುವ ಅನೇಕ ರೀತಿಯಲ್ಲಿ ವಾಹನಗಳು, ಚಾಲನಾ ಪರವಾನಗಿ, ಅನುಮತಿ ಪತ್ರ ಹೀಗೆ ಸಾರ್ವಜನಿಕರಿಗೆ ಸೇವೆ ಬೇಕಾಗಿದೆ. ಇಂತಹ ಸ್ಥಳದಲ್ಲಿ ಹಲವು ಮೂಲಭೂತ ಸೌಕರ್ಯ ಸಾರ್ವಜನಿಕರಿಗೆ ಸಿಗಬೇಕಿದೆ ಎಂದು ತಿಳಿಸಿದರು.


ಮಧ್ಯವರ್ತಿಗಳಿಗೆ ಕಡಿವಾಣ ;
ಸಾರಿಗೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಮಧ್ಯವರ್ತಿಗಳಿಗೆ ಕಡಿವಾಣ ಹಾಕುವ ಜತೆಗೆ ಕಚೇರಿಗೆ ನೇರವಾಗಿ ಆಗಮಿಸಿ ಸೇವೆಗಳನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಸಾರ್ವಜನಿಕರನ್ನು ಪೀಡಿಸುವ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.


ವಾಹನಗಳ ಹರಾಜಿಗೆ ಸೂಚನೆ :
ಕಚೇರಿ ಆವರಣದಲ್ಲಿರುವ ಸೀಜ್ ಮಾಡಿರುವ ವಾಹನಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ನಂತರ ಅಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ. ಟ್ರ್ಯಾಕ್ ನಿರ್ಮಾಣ, ಸ್ಟಾಕ್ ಯಾರ್ಡ್, ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸಲು ನಗರದ ಹೊರ ವಲಯದಲ್ಲಿರ ಈಗಾಗಲೇ ಆರು ಎಕರೆ ಜಮೀನು ಗುರುತಿಸಲಾಗಿದೆ. ಅದನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.


ಹಾಳಾಗಿರುವ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇದುವರೆಗೆ ಸಾಧ್ಯವಾಗಿರಲಿಲ್ಲ. ಮೊದಲು ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಮಾಡಬೇಕು. ರಸ್ತೆಯ ಎರಡೂ ಬದಿ ಫುಟ್‌ಪಾತ್ ವ್ಯವಸ್ಥೆ ಕಲ್ಪಿಸಬೇಕು. ಇದನ್ನು ಮಾಡದೆ ನಾವು ಕೇವಲ ಅಧಿಕಾರಿಗಳ ಮೇಲೆ ಒತ್ತಡ ಹೇರಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದರು.


ಫುಟ್‌ಪಾತ್ ನಿರ್ಮಾಣಕ್ಕೆ ಕ್ರಮ :
ಕೆಂಪೇಗೌಡ ಸರ್ಕಲ್‌ನಿಂದ ಐಜೂರು ಸರ್ಕಲ್‌ವರೆಗೂ ಫುಟ್‌ಪಾತ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕನಕಪುರ ಸರ್ಕಲ್, ಕೆಂಪೇಗೌಡ ಸರ್ಕಲ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡಲು, ಅದನ್ನ ಸುಂದರೀಕರಣ ಕೆಲಸ ಮಾಡಲು ಕೈಗೆತ್ತಿಕೊಂಡಿದ್ದೇವೆ. ಐಜೂರು ವೃತ್ತದಲ್ಲಿರುವ ಸಿಗ್ನಲ್ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಣಗೊಳಿಸಿ, ಅಲ್ಲಿ ಅಶೋಕ ಸ್ತಂಭವನ್ನು ಸ್ಥಾಪನೆ ಮಾಡಲು ೧೦ ಕೋಟಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.


ಹೈಟೆಕ್ ಬಸ್ ನಿಲ್ದಾಣ :
ಹೈಟೆಕ್ ಬಸ್ ನಿಲ್ದಾಣ ಮಾಡಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಯೋಜನೆ ರೂಪುರೇಷೆ ಸಿದ್ಧಪಡಿಸಲು ತಿಳಿಸಿದ್ದಾರೆ. ಅಲ್ಲಿಯವರೆವಿಗೂ ವಾಹನಗಳು ಬೇರೆ ಸ್ಥಳದಲ್ಲಿ ನಿಲ್ಲಿಸಬೇಕು. ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ ಎಂದು ಇದೇ ವೇಳೆ ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಂ.ಕೃಷ್ಣೇಗೌಡ, ಮೋಟಾರು ವಾಹನ ನಿರೀಕ್ಷಕರಾದ ಕುಮಾರಸ್ವಾಮಿ, ರಘುನಂದನ್, ವಿದ್ಯಾ, ಅಧೀಕ್ಷಕರಾದ ಯಮರಾಜ, ಪವಾರ್, ಸಂತೋಷ್ ನಗರಸಭೆ ಸದಸ್ಯರಾದ ಅಜ್ಮತ್ ಉಲ್ಲಾ ಖಾನ್, ನಿಜಾಮುದ್ದೀನ್ ಷರೀಫ್, ಬೈರೇಗೌಡ, ಆಯಿಷಾ ಬಾನು, ಜಯಲಕ್ಷ್ಮಮ್ಮ, ಮುಖಂಡರಾದ ಗುರುಪ್ರಸಾದ್, ರಾಮಣ್ಣ, ಧನರಾಜ್, ರಮೇಶ್, ಗುರುವೇಗೌಡ, ವಾಸುದೇವ್, ನವೀನ್, ಚನ್ನಮಾನಹಳ್ಳಿ ರಾಜು, ಕನ್ನಡ ರಾಜು, ಅತಾವುಲ್ಲಾ ಮತ್ತಿತರರು ಇದ್ದರು.