Home ಜಿಲ್ಲೆ ಚನ್ನ ರೇಣುಕ ಬಸವ ಪ್ರಶಸ್ತಿಗೆ ಸಂಗೀತ ದಿಗ್ಗಜ ವೆಂಕಟೇಶಕುಮಾರ ಆಯ್ಕೆ: ಹಾರಕೂಡ ಶ್ರೀ

ಚನ್ನ ರೇಣುಕ ಬಸವ ಪ್ರಶಸ್ತಿಗೆ ಸಂಗೀತ ದಿಗ್ಗಜ ವೆಂಕಟೇಶಕುಮಾರ ಆಯ್ಕೆ: ಹಾರಕೂಡ ಶ್ರೀ

ಬಸವಕಲ್ಯಾಣ: ಬೀದರ್ ಜಿಲ್ಲೆಯ ಸುಕ್ಷೇತ್ರ ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ-೨೦೨೬’ಕ್ಕೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ, ಪದ್ಮಶ್ರೀ ಪುರಸ್ಕೃತ ಪಂಡಿತ ಡಾ. ಎಂ. ವೆಂಕಟೇಶಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಹಾರಕೂಡ ಮಠದಲ್ಲಿ ರವಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ವಿಷಯ ಪ್ರಕಟಿಸಿದರು.
ಲಿಂ. ಶ್ರೀ ಗುರುಲಿಂಗ ಶಿವಾಚಾರ್ಯರ ೫೭ನೇ ಪುಣ್ಯ ಸ್ಮರಣೋತ್ಸವ ಹಾಗೂ ೪೦ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆಯ ಅಂಗವಾಗಿ ದಿನಾಂಕ ೧೯-೧೦-೨೦೨೬ರ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಮಠದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಎರಡು ತೊಲೆ ಚಿನ್ನದ ಪದಕ ಒಳಗೊಂಡಿರುತ್ತದೆ ಎಂದರು.
ಸಮನ್ವಯತೆಯ ಪ್ರತೀಕ ಪ್ರಶಸ್ತಿ:
ಶ್ರೀ ಚನ್ನಬಸವ ಶಿವಯೋಗಿಗಳು, ಆದಿ ಜಗದ್ಗುರು ರೇಣುಕಾಚಾರ್ಯರು ಹಾಗೂ ಜಗದ್ಗುರು ಬಸವೇಶ್ವರರ ಸಾಮರಸ್ಯ-ಸಮನ್ವಯ ತತ್ವವನ್ನು ಸಾರುವ ಉದ್ದೇಶದಿಂದ ೨೦೧೧ರಿಂದ ಈ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದುವರೆಗೂ ನಾಡಿನ ಅನೇಕ ಗಣ್ಯರಿಗೆ ಸಂದಿದೆ. ಈ ವರ್ಷ ೧೪ನೇ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಡಾ. ಪಂ. ಎಂ. ವೆಂಕಟೇಶಕುಮಾರ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಉಪನ್ಯಾಸ ಹಾಗೂ ಗ್ರಂಥ ಬಿಡುಗಡೆ:
ಅಕ್ಟೋಬರ್ ೧೯ರಂದು ನಡೆಯಲಿರುವ ಈ ಬೃಹತ್ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತಾನು ವಹಿಸಲಿದ್ದು, ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.
ಸಮಾರಂಭದಲ್ಲಿ ಪ್ರೊ. ನಿಜಲಿಂಗಪ್ಪ ಮತ್ತಿಹಾಳ ಅವರು ‘ಬೇಂದ್ರೆ ಕಾವ್ಯ: ಮರ್ತ್ಯದಲ್ಲಿ ಅರಳಿದ ದೇವಲೋಕ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಮಲ್ಲಿನಾಥ ಹಿರೇಮಠ ಸಂಗ್ರಹಿಸಿದ ‘ ಹಾರಕೂಡ ಚನ್ನಬಸವ’ (ಹಾರಕೂಡ ಚನ್ನಬಸವ ಶಿವಯೋಗಿಗಳ ಕುರಿತು ಭಕ್ತಿಗೀತೆಗಳು) ಹಾಗೂ ಪ್ರೊ. ನಿಜಲಿಂಗಪ್ಪ ಮತ್ತಿಹಾಳ ವಿರಚಿತ ‘ಬೇಂದ್ರೆ ಕಾವ್ಯ: ಮರ್ತ್ಯದಲ್ಲಿ ಅರಳಿದ ದೇವಲೋಕ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಶ್ರೀಗಳು ಹೇಳಿದರು.