
ಕಲಬುರಗಿ,ಅ.10: ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಹಣದ ಆಸೆಗೆ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯನ್ನು ಕೊಂದ ಪ್ರಕರಣದಲ್ಲಿ ಮಹಾರಾಷ್ಟ್ರದ ವ್ಯಕ್ತಿಗೆ ಇಲ್ಲಿನ ಜಿಲ್ಲಾ ಕೋರ್ಟ್ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 30 ಸಾವಿರ ದಂಡ ವಿಧಿಸಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನವನಾಥ ಮಹಾಪುರೆ( 33) ಶಿಕ್ಷೆಗೆ ಒಳಗಾದ ಅಪರಾಧಿ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯುವಕ ಮಹೇಶ ಅಂಕುಶ ಕೋಲತೆ ( 29) ಎಂಬಾತನಿಗೆ ಊರೂರು ಸಂಚರಿಸುವ ಹವ್ಯಾಸವಿತ್ತು. ಅದರಂತೆ ಆತ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಬಂದಿದ್ದ. ಬಸ್‍ನಲ್ಲಿ ಆತನಿಗೆ ನವನಾಥ ಮಹಾಪುರೆಯ ಪರಿಚಯವಾಗಿತ್ತು. ಇಬ್ಬರಿಗೂ ಮದ್ಯ ಸೇವನೆಯ ಚಟವಿತ್ತು. ಅದರಂತೆ ಗಾಣಗಾಪುರದ ಬಾರ್‍ವೊಂದರಲ್ಲಿ ಮದ್ಯ ಖರೀದಿಗೆ ಹೋಗಿದ್ದರು. ಈ ವೇಳೆ ಮಹೇಶ ಬಳಿ ಸಾಕಷ್ಟು ಹಣ ಇರುವುದನ್ನು ಕಂಡ ನವನಾಥ ಕೊಲೆಗೆ ನಿರ್ಧರಿಸಿದ್ದ.2024ರ ಜೂನ್ 25ರಂದು ರಾತ್ರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ.ಮಹೇಶ ಬಳಿಯಿದ್ದ 3,600 ರೂ.ಕದ್ದು ಪರಾರಿಯಾಗಿದ್ದ.
ಈ ಪ್ರಕರಣದ ತನಿಖೆ ನಡೆಸಿದ್ದ ಅಫಜಲಪುರ ಠಾಣೆಯ ಆಗಿನ ಸಿಪಿಐ ಚನ್ನಯ್ಯ ಎಸ್.ಹಿರೇಮಠ, ಡಿಎನ್‍ಎ ವರದಿ, ವಿಧಿವಿಜ್ಞಾನ ಪ್ರಯೋಗಾಲಯ ವರದಿ, ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತಿತ್ತರ ಪುರಾವೆ ಆಧರಿಸಿ ಕೋರ್ಟ್‍ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸರಿತಾ ಡಿ. ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ.ನಾಕಮನ್ ಅವರು ವಾದ ಮಂಡಿಸಿದರು.























