
ರೋಮ್, ಮೇ. ೨೦- ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಟಲಿ ರಾಜಧಾನಿ ರೋಮ್‌ಗೆ ಭೇಟಿ ನೀಡಿದ್ದಾರೆ. ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೊನಿ ಮೋದಿಯವರಿಗೆ ಅದ್ಧೂರಿ ಸ್ವಾಗತ ನೀಡಿ ಬರ ಮಾಡಿಕೊಂಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೇಲೋನಿ ನನ್ನ ಸ್ನೇಹಿತ ಮೋದಿಯವರಿಗೆ ರೋಮ್‌ಗೆ ಸುಸ್ವಾಗತ ಹೇಳಿದ್ದು, ಮೋದಿ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರು ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ರೋಮ್‌ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೆಲೋನಿ ಜೊತೆ ಭೋಜನ ಕೂಟದಲ್ಲಿ ಭಾಗವಹಿಸುವ ಅವಕಾಶ ಲಭಿಸಿತು ಎಂದಿದ್ದಾರೆ.
ನಂತರ ಐತಿಹಾಸಿಕ ಕೊಲೊಸಿಯಂಗೆ ಇಬ್ಬರು ಭೇಟಿ ನೀಡಿದೆವು. ಈ ವೇಳೆ ಹಲವು ಮಹತ್ವಗಳ ವಿಷಯಗಳ ಬಗ್ಗೆ ಪರಸ್ಪರ ಅಭಿಪ್ರಾಯ ಮಾಡಿಕೊಂಡೆವು. ಎರಡು ದೇಶಗಳ ನಡುವೆ ನಡೆಯಲಿರುವ ದ್ವಿಪಕ್ಷಿಯ ವ್ಯಾಪಾರ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ. ಭಾರತ ಮತ್ತು ಇಟಲಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಅನಿವಾಸಿ ಭಾರತೀಯರ ಸ್ವಾಗತ
ಪ್ರಧಾನಿ ನರೇಂದ್ರಮೋದಿಯವರು ರೋಮ್ ಗೆ ತಲುಪುತ್ತಿದ್ದಂತೆಯೇ ಅನಿವಾಸಿ ಭಾರತೀಯರು ಭರ್ಜರಿ ಸ್ವಾಗತ ಕೋರಿದ್ದಾರೆ.
ತ್ರಿವರ್ಣ ಧ್ವಜಗಳನ್ನು ಹಿಡಿದು ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಭಿಮಾನ ವ್ಯಕ್ತಪಡಿಸಿದರು.
ಕೆಲ ಕಲಾವಿದರು ಬಾರತೀಯರ ಶಾಸ್ತ್ರೀಯ ಸಂಗೀತ ಪ್ರದರ್ಶನ ನೀಡಿದರೆ, ಯುವಕರು ಭಾರತ, ಇಟಲಿ ಬಾಂಧವ್ಯ ಬೆಸೆಯುವ ಪ್ರದರ್ಶನ ನೀಡಿದ್ದು ಗಮನಸೆಳೆಯಿತು.
























