
ಸಂಜೆವಾಣಿ ವಾರ್ತೆ
ಹೊಸಪೇಟೆ. ಮೇ.20 : ಸ್ಥಳೀಯ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ಹಾಗೂ ಕುಂದು ಕೊರತೆಗಳ ಸಭೆ ನಡೆಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಡಾ: ಎಲ್.ಮೂರ್ತಿ ಅವರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಪದಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಸ್ಲಂ ಜನರ ಸಂಘಟನೆ ಅಧ್ಯಕ್ಷ ಹೆಚ್.ಶೇಷು, ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ಹೊಸಪೇಟೆ ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಸಮಿತಿ ಸದಸ್ಯ ರವಿಶಂಕರ ದೇವರಮನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಸ್.ಎಸಿ, ಎಸ್.ಟಿ ಸಮುದಾಯದ ಮುಖಂಡರುಗಳು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಜಿಲ್ಲೆಯಲ್ಲಿ ಪ್ರಮುಖವಾಗಿ ಎಸ್.ಸಿ, ಎಸ್.ಟಿ ಭೂಮಿ ಖರೀದಿ, ಸ್ಲಂ ಸಮಸ್ಯೆಗಳು, ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸುವುದು. ಮೂಲಭೂತ ಸೌಕರ್ಯ, ಎಸ್.ಸಿ, ಎಸ್.ಟಿ ಹಾಸ್ಟೆಲ್ ಗಳಲ್ಲಿನ ಅವ್ಯವಸ್ಥೆ, ನಕಲಿ ಜಾತಿ ಪ್ರಮಾಣಪತ್ರದ ಹಾವಳಿ, ಎಸ್.ಸಿ, ಎಸ್.ಟಿ ನಿಧಿ ದುರ್ಬಳಕೆ, ಪೌರ ಕಾರ್ಮಿಕರ ವೇತನ ನೀಡದಿರುವುದು ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಎಸ್.ಸಿ, ಎಸ್.ಟಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಸಭೆಯ ಗಮನಕ್ಕೆ ತರುವ ಜೊತೆಗೆ ಅಹವಾಲು ಸಲ್ಲಿಸಿದ್ದಾರೆ. ಒಟ್ಟು 70ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು. ಈ ಎಲ್ಲಾ ಸಮಸ್ಯೆಗಳ ಕುರಿತು 20 ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷÀ ಡಾ.ಎಲ್.ಮೂರ್ತಿ ಸಭೆಯಲ್ಲಿ ತಿಳಿಸಿದರು.
ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ. ಜಿಲ್ಲಾ ಪಂಚಾಯತ್ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಕಾರ್ಯದರ್ಶಿ ಡಾ.ಹೆಚ್.ಎಸ್. ಶಿವರಾಮ್, ಸದಸ್ಯರಾದ ಗೀತಾ ಥಾವಂಶಿ, ಎನ್.ದಿವಾಕರ್, ಸುನೀಲ್ ಎಂ. ಉಕ್ಕಲಿ, ಹೂಡಾ ಅಧ್ಯಕ್ಷ ಹೆಚ್.ಎನ್.ಎಫ್ ಇಮಾಮ್ ನಿಯಾಜಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.





















