
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೩: ಗ್ರಾಮೀಣ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಾಧ್ಯವಾದಷ್ಟು ಅಹವಾಲುಗಳನ್ನು ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಸರ್ಕಾರ ಪ್ರಜಾ ಸೇವಾ ಆಂದೋಲನವನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ವಿಜಯಪುರ ತಾಲೂಕಿನ ನಾಗಠಾಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಅಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ತೇಗು ಸಿರಿ ಯೋಜನೆಯ ಸದುಪಯೋಗ ಪಡೆಯಿರಿ
ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಮಳೆಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ತೇಗು ಸಿರಿ ಯೋಜನೆ ಜಾರಿಗೊಳಿಸಿದೆ. ರೈತರು ಯೋಜನೆಯಡಿ ಉಚಿತವಾಗಿ ತೇಗು ಸಸಿಗಳನ್ನು ಪಡೆದು ತಮ್ಮ ಜಮೀನಿನಲ್ಲಿ ಬೆಳೆಸಬೇಕು. ಸುಮಾರು ೧೮ ವರ್ಷಗಳ ಕಾಲ ತೇಗು ಮರಗಳನ್ನು ಬೆಳೆಸಿದರೆ ಉತ್ತಮ ಆದಾಯ ಗಳಿಸುವ ಅವಕಾಶವಿದ್ದು, ರೈತರು ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮಹಾತ್ಮ ಗಾಂಧೀಜಿಯವರ ‘ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ’ ಎಂಬ ಆಶಯದಂತೆ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಪ್ರಜಾ ಸೇವಾ ಆಂದೋಲನದ ಮೂಲಕ ಗ್ರಾಮೀಣ ಮಟ್ಟದಲ್ಲಿಯೇ ಜನರ ಅಹವಾಲುಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಈಗಾಗಲೇ ಶೇ.೮೦ರಷ್ಟು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ ಶೇ.೨೦ರಷ್ಟು ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಾಗಠಾಣ ಹಾಗೂ ಹುಣಶ್ಯಾಳ ಕೆರೆಗಳನ್ನು ಬಹುಹಳ್ಳಿ ಕುಡಿಯುವ ನೀರು ಯೋಜನೆಯಡಿ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರ ಸಹಕಾರದಿಂದ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಶಾಲೆಗಳಿಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ಶಿಕ್ಷಣ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ ಎಂದು ಶಾಸಕ ವಿಠ್ಠಲ ಕಟಕದೊಂಡ ತಿಳಿಸಿದರು.
ಹಕ್ಕುಪತ್ರ, ಪಿಂಚಣಿ ಆದೇಶ ವಿತರಣೆ
ಕಾರ್ಯಕ್ರಮದಲ್ಲಿ ನಾಗಠಾಣ ಗ್ರಾಮದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ, ಹೊಸ ಪಿಂಚಣಿ ಆದೇಶ ಹಾಗೂ ಇ-ಸ್ವತ್ತು ದಾಖಲೆಗಳನ್ನು ವಿತರಿಸಲಾಯಿತು.
ಪಂಚಾಯತ್ ರಾಜ್ ಇಲಾಖೆ, ಹೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಹವಾಲುಗಳನ್ನು ಸಂಬAಧಿಸಿದ ಅಧಿಕಾರಿಗಳು ಸ್ವೀಕರಿಸಿ, ಸ್ಥಳದಲ್ಲೇ ಪರಿಶೀಲನೆ ನಡೆಸಿ ಪರಿಹಾರ ಕಲ್ಪಿಸಲು ಕ್ರಮವಹಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಶೇಖರ ಅವಜಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ತಹಸೀಲ್ದಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



























