Home ಜಿಲ್ಲೆ ಬೆಂಗಳೂರು ರಸ್ತೆಗಳ ಅಭಿವೃದ್ಧಿ ಪರಿಶೀಲಿಸಿದಸ ಶಾಸಕ ಮಂಜುನಾಥ್

ರಸ್ತೆಗಳ ಅಭಿವೃದ್ಧಿ ಪರಿಶೀಲಿಸಿದಸ ಶಾಸಕ ಮಂಜುನಾಥ್

ಕೋಲಾರ,ಜು.೨- ನಗರದ ೯ನೇ ವಾರ್ಡಿನ ರಸ್ತೆಗಳು ತೀವ್ರವಾಗಿ ಹದಗೆಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರು, ಬುಧವಾರ ಸ್ವತಃ ರಸ್ತೆಗಿಳಿದು ವಾರ್ಡಿನ ಪ್ರತಿಯೊಂದು ಗಲ್ಲಿಗಳಲ್ಲೂ ಸಂಚರಿಸಿ ಸಮಗ್ರ ಪರಿಶೀಲನೆ ನಡೆಸಿದರು.


ಪರಿಶೀಲನೆ ವೇಳೆ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿದ ಶಾಸಕರು, ನಗರದ ಅಭಿವೃದ್ಧಿ ವಿಚಾರದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ, ಅದನ್ನೆಲ್ಲಾ ಸಮರ್ಥವಾಗಿ ನಿವಾರಿಸಲಾಗುವುದು. ಸಾರ್ವಜನಿಕರ ಮತ್ತು ವಾರ್ಡಿನ ನಿವಾಸಿಗಳ ಹಿತದೃಷ್ಟಿಯಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ, ಶೀಘ್ರದಲ್ಲೇ ವಾರ್ಡಿನ ಮುಖಪುಟ ಬದಲಾಗಲಿದೆ” ಎಂದು ಭರವಸೆ ನೀಡಿದರು.


ಇದೇ ವೇಳೆ ಶಾಸಕರ ಕಾರ್ಯವೈಖರಿಯನ್ನು ಮುಕ್ತಕಂಠದಿ೦ದ ಶ್ಲಾಘಿಸಿದ ವಾರ್ಡಿನ ಸಾರ್ವಜನಿಕರೊಬ್ಬರು, ನಿಮ್ಮ ಅಭಿವೃದ್ಧಿ ಕಾರ್ಯಗಳು ಇಡೀ ಕೋಲಾರ ಕ್ಷೇತ್ರಕ್ಕೆ ಮಾದರಿಯಾಗಿವೆ. ಇದೇ ರೀತಿ ಅಭಿವೃದ್ಧಿ ಪರ್ವ ಮುಂದುವರೆಯಲಿ. ಮುಂಬರುವ ಚುನಾವಣೆಯಲ್ಲಿ ನಮ್ಮ ಇಡೀ ಸಮುದಾಯ ನಿಮ್ಮ ಬೆನ್ನಿಗೆ ನಿಂತು, ನಿಮ್ಮನ್ನು ಬೆಂಬಲಿಸಿ ಹರಸಲಿದೆ ಎಂದು ಜೈಕಾರ ಹಾಕಿದರು. ಸಾರ್ವಜನಿಕರ ಈ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಏನೇ ಸಮಸ್ಯೆಗಳಿದ್ದರೂ ತಕ್ಷಣವೇ ಬಗೆಹರಿಸಿ ವಾರ್ಡನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.


ಸಾರ್ವಜನಿಕರೊಬ್ಬರು ಎಸ್.ಐ.ಆರ್. ಪ್ರಕ್ರಿಯೆಗೆ ಸಂಬ೦ಧಿಸಿದ೦ತೆ ಬಿ.ಎಲ್.ಓ.ಗಳು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಈ ವಾರ್ಡಿನಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕರಲ್ಲಿ ಅಳಲು ತೋಡಿಕೊಂಡರು.


ದೂರಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಶಾಸಕ ಕೊತ್ತೂರು ಜಿ ಮಂಜುನಾಥ್ ಅವರು, ಸಾರ್ವಜನಿಕರ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಬಿ.ಎಲ್.ಓ ೨ ರನ್ನು ಕೂಡಲೇ ಬದಲಾವಣೆ ಮಾಡಲಾಗುವುದು. ನಿಮ್ಮ ವಾರ್ಡಿನ ಬಿ.ಎಲ್.ಓ ೧ ನಾನೇ ಆಗಿದ್ದು, ಜನರಿಗೆ ತೊಂದರೆ ಕೊಡುವ ಬಿ.ಎಲ್.ಓ ೨ ರನ್ನು ಬದಲಾಯಿಸುವ ಅಧಿಕಾರ ನನಗಿದೆ. ಕ್ಷೇತ್ರದ ಯಾವುದೇ ನಾಗರಿಕರು ಎಸ್.ಐ.ಆರ್.ನಿಂದ ವಂಚಿತರಾಗಬಾರದು. ಪ್ರತಿಯೊಬ್ಬ ಅರ್ಹರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ನಾಗರಿಕರಲ್ಲಿ ಧೈರ್ಯ ತುಂಬಿದರು.


ಶಾಸಕರ ಈ ದಿಢೀರ್ ಭೇಟಿ, ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಎಚ್ಚರಿಕೆ ಹಾಗೂ ಅಭಿವೃದ್ಧಿಯ ಭರವಸೆಗಳು ೯ನೇ ವಾರ್ಡಿನ ನಿವಾಸಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್‌ಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಸರ್, ಮೈಲಾಂಡಹಳ್ಳಿ ಮುರಳಿ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ನದೀಮ್, ಮುಖಂಡರುಗಳಾದ ವೀರೇಂದ್ರ ಪಾಟೀಲ್, ನಗರಸಭೆ ಪೌರಾಯುಕ್ತ ವೆಂಕಟೇಶ್ ಇನ್ನಿತರರು ಶಾಸಕರಿಗೆ ಸಾಥ್ ನೀಡಿದರು.