
ಔರಾದ್,ಆ.೩೦ : ತಾಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ(ಕಂಟೂರ್ ಟ್ರೆಂಚ್) ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಸಚಿವರು ಕಾಮಗಾರಿ ಸ್ಥಳದಲ್ಲಿದ್ದಕೂಲಿಕಾರ್ಮಿಕರೊಂದಿಗೆ ಕೆಲಕಾಲ ಸಂವಾದ ನಡೆಸಿ, ಸ್ವತಃ ಬುಟ್ಟಿಯಲ್ಲಿ ಮಣ್ಣು ಎತ್ತಿ ಹಾಕುವ ಮೂಲಕ ಕೂಲಿ ಕೆಲಸದಲ್ಲಿ ಭಾಗವಹಿಸಿದರು. ಬಳಿಕ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಸಚಿವರು, ವಿಬಿಜಿ ರಾಮ್‌ಜಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ದಿನಕ್ಕೆ ರೂ.೩೭೦ ಇದ್ದ ಕೂಲಿ ಮೊತ್ತವನ್ನು ರೂ.೩೮೨ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ವಾರ್ಷಿಕ ಉದ್ಯೋಗದ ದಿನಗಳನ್ನು ೧೦೦ರಿಂದ ೧೨೫ ದಿನಗಳಿಗೆ ಹೆಚ್ಚಿಸಲಾಗಿದ್ದು, ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಸಂಖ್ಯೆಯನ್ನು ೩೧೮ಕ್ಕೆ ಹೆಚ್ಚಿಸಲಾಗಿದೆ.
ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರು ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ತಹಸೀಲ್ದಾರ್ ಮಹೇಶ ಪಾಟೀಲ್, ಕಾರ್ಯದರ್ಶಿ(ಆಡಳಿತ) ಜೈಪ್ರಕಾಶ ಚವ್ಹಾಣ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ (ಗ್ರಾ.ಉ) ಶಿವಕುಮಾರ್ ಘಾಟೆ, ಸಿಪಿಐ ರಘುವೀರಸಿಂಗ್ ಠಾಕೂರ್, ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ಎಕಲುರೆ, ಪಿಎಸ್ ಐ ದಿನೇಶ್, ಪಿಡಿಒ ನಂದಕುಮಾರ ಶಾಸ್ತ್ರಿ, ತಾಪಂ ಹಾಗೂ ಗ್ರಾಪಂ ಸಿಬ್ಬಂದಿಯವರು, ಸಾರ್ವಜನಿಕರು, ಕೂಲಿಕಾರ್ಮಿಕರು ಉಪಸ್ಥಿತರಿದ್ದರು.
ಜುಲೈ ೧ರಿಂದ ಜಾರಿಗೆ ಬಂದಿರುವ ವಿಬಿಜಿ ರಾಮ್‌ಜಿ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ೬೦:೪೦ರ ಅನುಪಾತದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕನಿಗೂ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಉದ್ಯೋಗಕ್ಕಾಗಿ ಯಾರೂ ಗುಳೆ ಹೋಗದಂತೆ ಗ್ರಾಮದಲ್ಲಿಯೇ ಕೆಲಸ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು. ವೈಯಕ್ತಿಕ ಕಾಮಗಾರಿಗಳ ಮೂಲಕ ಗ್ರಾಮೀಣ ಕುಟುಂಬಗಳ ಜೀವನೋಪಾಯಕ್ಕೆ ನೆರವು ನೀಡುವುದರ ಜೊತೆಗೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಕಾಮಗಾರಿ ಸ್ಥಳದಲ್ಲಿಯೇ ಕೂಲಿಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು. ಆರೋಗ್ಯ ಸಿಬ್ಬಂದಿ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಆರೋಗ್ಯ ಸೇವೆ ಒದಗಿಸಿದರು.































