
ವಿಜಯಪುರ, ಸೆ. 21:ಸುದರ್ಶನ ಕ್ರಿಯೆಯ ನಿಯಮಿತ ಅಭ್ಯಾಸದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು, ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಡಾ. ಬಿ.ಎಂ. ಪಾಟೀಲ್ ಗುರೂಜಿ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳನ್ನು ಆರಂಭಿಸಿ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ನಗರದ ಸಾಯಿ ಪಾರ್ಕ್ ಬಡಾವಣೆಯ ಏಳು ಮಕ್ಕಳ ತಾಯಿ ಸಮುದಾಯ ಭವನದಲ್ಲಿ ಆರ್ಟ್ ಆಫ್ ಲಿವಿಂಗ್ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರನ್ನು ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಿ.ಎಂ. ಪಾಟೀಲ್ ಗುರೂಜಿ, ಆರೋಗ್ಯದ ಮಹತ್ವವನ್ನು ವಿವರಿಸಿದರು. ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ ಹಾಗೂ ಪ್ರಾಣಾಯಾಮಗಳು ಸಹಕಾರಿಯಾಗಿವೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಇಂತಹ ಅಭ್ಯಾಸಗಳನ್ನು ಅಳವಡಿಸಿಕೊಂಡು ಸಂತೋಷ, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ರಹ್ಮಕುಮಾರಿ ರಾಜಯೋಗಿನಿ ಸುವರ್ಣ ಅಕ್ಕನವರು ನಶಾಮುಕ್ತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಾ. ರವೀಂದ್ರ ಬೆಳ್ಳಿ, ಗೀತಾ ದೇಸಾಯಿ, ಮಹಾದೇವಯ್ಯ ಗಚ್ಚಿನಮಠ, ಎನ್.ಡಿ. ಮಸೂತಿ, ಪ್ರಕಾಶ ಚವ್ಹಾಣ, ಚಂದ್ರಶೇಖರ ಸಿಂಧೂರ, ಯೋಗ ಶಿಕ್ಷಕಿ ಸಹನಾ ಪಾಟೀಲ್, ಬಸಲಿಂಗಮ್ಮ ಮಸೂತಿ, ಮಹಾನಂದಾ ಬಿರಾದಾರ, ಜ್ಯೋತಿ ಪಾಟೀಲ, ಸವಿತಾ ಕಟ್ಟಿ, ಮಹಾದೇವಿ ಬಿರಾದಾರ, ಲಕ್ಷ್ಮೀಬಾಯಿ, ಜಗದೀಶ್ ಹುಲ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.































