
ಕೆ.ಆರ್.ಪುರ,ಅ.೧೦- ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಪರವಾಗಿಕೆಆರ್ ಪುರ ವಿಧಾನಸಭಾ ಕ್ಷೇತ್ರದ ರಾಮಮೂರ್ತಿನಗರದ ಲೋಟಸ್ ಪ್ಯಾಲೇಸ್‌ನಲ್ಲಿ ಶಿಕ್ಷಕರ ಬೆಂಬಲ ಕೋರಿ ಶಾಸಕ ಬೈರತಿ ಬಸವರಾಜ ನೇತೃತ್ವದಲ್ಲಿ ಶಿಕ್ಷಕರ ಸಭೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಾಗೂ ಸಂಬಂಧಿತ ವಿಚಾರಗಳ ಕುರಿತು ಚರ್ಚಿಸಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರಿಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಲಾಯಿತು. ಅಭ್ಯರ್ಥಿಯ ಗೆಲುವಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಬಿಜೆಪಿ-ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ಚುನಾವಣಾ ಪ್ರಚಾರ ಹಾಗೂ ಸಂಘಟನಾ ಕಾರ್ಯಗಳನ್ನು ಸಮನ್ವಯದಿಂದ ನಡೆಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಎನ್‌ಡಿಎ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಬೇಕು ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ಪ್ರ.ಕಾರ್ಯದರ್ಶಿಗಳಾದ ಲೋಕೇಶ್, ಮಾರ್ಕೆಟ್ ರಮೇಶ್, ಶ್ರೀರಾಮುಲು, ಪಾಲಿಕೆ ಮಾಜಿ ಸದಸ್ಯರಾದ ಗೀತಾವಿವೇಕಾನಂದ, ಶ್ರೀಕಾಂತ್, ಅಂತೋಣಿಸ್ವಾಮಿ, ಮುಖಂಡರಾದ ರಾಮಚಂದ್ರಪ್ಪ, ಇಟಾಚಿ ಮಂಜು, ಜೆಡಿಎಸ್ ಅಧ್ಯಕ್ಷ ಲಕ್ಷ್ಮಣ್, ಜೆಡಿಎಸ್ ಮುಖಂಡರಾದ ಸುರೇಶ್, ಮತ್ತಿತರರಿದ್ದರು.
























