Home ಮುಖಪುಟ ಸುದ್ದಿ ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್

ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್

ನವದೆಹಲಿ, ಮೇ ೨೦: ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್‌ಲೈನ್ ಮೂಲಕ ಔಷಧ ಮಾರಾಟ ನಿಲ್ಲಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಇಂದು (ಮೇ ೨೦) ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಬಂದ್‌ಗೆ ಕರೆ ನೀಡಿದೆ.
ಆಂಧ್ರಪ್ರದೇಶದಾದ್ಯಂತ ಸುಮಾರು ೪೦ ಸಾವಿರಕ್ಕೂ ಹೆಚ್ಚು ಔಷಧ ಅಂಗಡಿಗಳು ಒಂದು ದಿನದ ಮಟ್ಟಿಗೆ ಬಂದ್ ಆಗಲಿವೆ. ದೇಶದ ೧೨.೪ ಲಕ್ಷಕ್ಕೂ ಹೆಚ್ಚು ಔಷಧಿ ವಿತರಕರನ್ನು ಪ್ರತಿನಿಧಿಸುವ ‘ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘಟನೆ’ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ಈ ಕುರಿತು ಮಾಹಿತಿ ನೀಡಿರುವ ಆಂಧ್ರಪ್ರದೇಶ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪಿ.ವಿ. ರತ್ನಂ, ಇಂದು ರಾಜ್ಯದಾದ್ಯಂತ ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


ಇತ್ತ ಮೈಸೂರಿನಲ್ಲೂ ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟ, ಇ- ಫಾರ್ಮಸಿಗಳ ಭಾರಿ ರಿಯಾಯಿತಿ ಪದ್ಧತಿ ವಿರೋಧಿಸಿ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಸ್ಥೆ ಕರೆ ನೀಡಿರುವ ಬಂದ್‌ಗೆ ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಸಂಪೂರ್ಣ ಬೆಂಬಲ ನೀಡಿದೆ.


‘ಬಂದ್‌ನಿಂದ ಜಿಲ್ಲೆಯಲ್ಲಿ ಚಿಲ್ಲರೆ ಔಷಧ ಪೂರೈಕೆಗೆ ಅಡ್ಡಿಯಾಗಬಹುದು. ಸಾರ್ವಜನಿಕರ ಅನುಕೂಲಕ್ಕೆ ಹಲವು ಪ್ರದೇಶಗಳಲ್ಲಿ ತುರ್ತು ಔಷಧ ಮತ್ತು ಅಗತ್ಯ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಬೇಡಿಕೆಗಳೇನು ಇ-ಫಾರ್ಮಸಿ ಕಾರ್ಯಾಚರಣೆಗೆ ಅನುಮತಿ ನೀಡುವ ೨೦೧೮ರ ಜಿಎಸ್‌ಆರ್ ೮೧೭ (ಇ) ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು.ಕೋವಿಡ್-೧೯ ಅವಧಿಯಲ್ಲಿ ಮನೆಬಾಗಿಲಿಗೆ ಔಷಧಿ ತಲುಪಿಸಲು ಅನುಮತಿ ನೀಡಿದ್ದ ಜಿಎಸ್‌ಆರ್ ೨೨೦ (೨) ಆದೇಶವನ್ನು ರದ್ದುಗೊಳಿಸಬೇಕು.
ಕಾರ್ಪೊರೇಟ್ ಸಂಸ್ಥೆಗಳ ಭಾರಿ ರಿಯಾಯಿತಿ ದರ ಸಮರಕ್ಕೆ ಬ್ರೇಕ್ ಹಾಕಿ, ಎಲ್ಲ ವ್ಯಾಪಾರಿಗಳಿಗೂ ಸಮಾನ ಮುಕ್ತ ಮಾರುಕಟ್ಟೆ ಕಲ್ಪಿಸಬೇಕು.


ನಮ್ಮ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಹಿಂಜರಿಯುವುದಿಲ್ಲ ಎಂದು ಅಧ್ಯಕ್ಷ ಪಿ.ವಿ. ರತ್ನಂ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ


ಇಂದು ಕರ್ನಾಟಕದಾದ್ಯಂತ ಸಾವಿರಾರು ಮೆಡಿಕಲ್ ಶಾಪ್‌ಗಳು ಬಂದ್ ಆಗಿವೆ. ದೇಶವ್ಯಾಪಿ ಕರೆ ನೀಡಿರುವ
ಅಖಿಲ ಭಾರತೀಯ ಔಷಧ ವ್ಯಾಪಾರಿಗಳು ಸಂಘಟನೆ ಮುಷ್ಕರಕ್ಕೆ ಕರೆ ಕೊಟ್ಟಿವೆ.
ರಾಜ್ಯದಲ್ಲಿ ಸುಮಾರು ೨೬ ಸಾವಿರಕ್ಕೂ ಅಧಿಕ ಮೆಡಿಕಲ್ ಅಂಗಡಿಗಳು ಹಾಗೂ ಬೆಂಗಳೂರಿನಲ್ಲಿ ಸುಮಾರು ೬,೫೦೦ಕ್ಕೂ ಹೆಚ್ಚು ಮೆಡಿಕಲ್ ಸ್ಟೋರ್‌ಗಳಿವೆ. ಆದರೆ ರಾಜ್ಯದ ಮೆಡಿಕಲ್ ಸ್ಟೋರ್ ಮಾಲೀಕರಲ್ಲಿ ಪೂರ್ಣ ಒಮ್ಮತ ಕಾಣಿಸದ ಕಾರಣ ಕೆಲ ಅಂಗಡಿಗಳು ಮಾತ್ರ ಬಂದ್ ಆಗಿದ್ದು, ಇನ್ನೂ ಅನೇಕ ಮೆಡಿಕಲ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ಸುಮಾರು ೧೨ ಲಕ್ಷ ಮೆಡಿಕಲ್ ಶಾಪ್‌ಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ ಎಂದು ಸಂಘಟನೆ ತಿಳಿಸಿದೆ.


ಹೋರಾಟಕ್ಕೆ ಪ್ರಮುಖ ಕಾರಣ ಏನು?


ಆನ್‌ಲೈನ್ ಮೂಲಕ ಔಷಧ ಮಾರಾಟ ವೇಗವಾಗಿ ಹೆಚ್ಚುತ್ತಿರುವುದು ಸಾಂಪ್ರದಾಯಿಕ ಮೆಡಿಕಲ್ ಅಂಗಡಿಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ವಿಶೇಷವಾಗಿ ಃಟiಟಿಞiಣ, Sತಿiggಥಿ ಹಾಗೂ Zomಚಿಣo ಮುಂತಾದ ಆಪ್‌ಗಳ ಮೂಲಕ ಔಷಧಿ ವಿತರಣೆ ಹೆಚ್ಚುತ್ತಿರುವುದನ್ನು ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ.
ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿ ಮಾರಾಟ, ನಕಲಿ ಔಷಧಿಗಳ ಭೀತಿ, ಆಂಟಿಬಯೋಟಿಕ್ ದುರುಪಯೋಗ ಹಾಗೂ ನಿಯಂತ್ರಣರಹಿತ ಇ-ಫಾರ್ಮಸಿ ವ್ಯವಸ್ಥೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.