Home ಜಿಲ್ಲೆ ಬೆಂಗಳೂರು ನಾಜಿಯಾ ವಿರುದ್ದ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ನಾಜಿಯಾ ವಿರುದ್ದ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ಕೋಲಾರ:೪- ಕೋಲ್ಕತ್ತಾದ ಮಹಿಳೆ ನಾಜಿಯಾ ಇಲಾಹಿ ಖಾನ್ ಎಂಬುವರು ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾ ಸಿದ್ಧಿಖ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ನಗರದ ಮೆಕ್ಕೆ ವೃತ್ತದಲ್ಲಿ ಶುಕ್ರವಾರ ಕೋಲಾರ ಮುಸ್ಲಿಂ ಯೂತ್ ಪೋರಂ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಆಕೆ ವಿರುದ್ಧ ಕಾನೂನು ಕ್ರಮಕ್ಕೆ ತಹಶೀಲ್ದಾರ್ ಎಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರ ಹಾಗೂ ರಾಜ್ಯಪಾಲರ ಗಮನಕ್ಕೆ ತರುವಂತೆ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರು ನಾಜಿಯಾ ಇಲಾಹಿ ಖಾನ್ ಅವರು ಮುಸ್ಲಿಂ ಸಮುದಾಯದವರ ಧಾರ್ಮಿಕ ನಂಬಿಕೆ, ವಿಶ್ವಾಸಗಳಿಗೆ ಧಕ್ಕೆ ತಂದಿದ್ದಾರೆ. ಈ ಹೇಳಿಕೆಯಿಂದಾಗಿ ಮುಸ್ಲಿಂ ಸಮುದಾಯದವರಲ್ಲಿ ಅಸಹನೆ ಮೂಡಿದೆ. ಶಾಂತಿ, ನೆಮ್ಮದಿಯ ಬದುಕಿಗೆ ಭಂಗ ತರಲಾಗಿದೆ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಮುಸ್ಲಿಂ ಯುವ ಮುಖಂಡ ಸಾದಿಕ್ ಅಹ್ಮದ್ ಮಾತನಾಡಿ, ಪ್ರವಾದಿ ವಿರುದ್ಧ ಮಹಿಳೆಯು ಕೀಳುಮಟ್ಟದ ಭಾಷೆ ಬಳಸಿ ಮಾತನಾಡಿದ್ದಾಳೆ. ಆಕೆಗೆ ಜಾತಿ ಧರ್ಮ ಏನೆಂದು ಗೊತ್ತಿಲ್ಲ. ಪದೇಪದೇ ಹೇಳಿಕೆ ನೀಡಿ ಕೋಮುಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ದೇಶದ ೨೫ ಕೋಟಿ ಮುಸ್ಲಿಮರು ಮಾತ್ರವಲ್ಲ ಎಲ್ಲರಿಗೂ ನೋವುಂಟಾಗಿದೆ. ಪ್ರವಾದಿ ಎಲ್ಲರಿಗಿಂತ ಮೇಲು. ಅವರ ಬಗೆಗಿನ ಯಾವುದೇ ಅವಹೇಳನವನ್ನು ನಾವು ಸಹಿಸಲ್ಲ ಎಂದರು.


ಮುಖಂಡ ಇಮ್ರಾನ್ ಪಾಷಾ ಮಾತನಾಡಿ, ನಾಜಿಯಾ ಇಲಾಹಿ ಖಾನ್ ಕೀಳು ಮಟ್ಟಕ್ಕೆ ಇಳಿದು ಮಾತನಾಡಿದ್ದಾರೆ. ಅದನ್ನು ನಾವೆಲ್ಲಾ ಒಕ್ಕೊರಲಿನಿಂದ ಖಂಡಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಮನವಿ ಮಾಡಿದ್ದೇವೆ. ಆಕೆಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ರೀತಿ ಹೇಳಿಕೆ ಮತ್ತೆ ಬಂದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದರು.


ಮುಖಂಡ ಮನ್ಸೂರ್ ಅಲಿ ಮಾತನಾಡಿ, ಅವಹೇಳನ ಖಂಡಿಸಿ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಒಳ್ಳೆಯ ಕೆಲಸಕ್ಕೆ ಎಲ್ಲರ ಜೊತೆಗೂಡಿದ್ದಾರೆ. ಪ್ರವಾದಿ ಮೇಲೆ ಎಲ್ಲರಿಗೂ ಪ್ರೀತಿ ಇದೆ. ಪ್ರಚೋದನಕಾರಿ ಹೇಳಿಕೆಗೆ ಯಾರದ್ದೋ ಕುಮ್ಮಕ್ಕು ಇದೆ. ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಮುಸ್ಲಿಂ ಧರ್ಮಗುರುಗಳು ಹಿರಿಯ ಮುಖಂಡರು ಯುವಕರು ಸೇರಿದಂತೆ ಮುಸ್ಲಿಂ ಸಮುದಾಯದವರು ಪಾಲ್ಗೊಂಡಿದ್ದರು.