Home Lead News ಕಮಲೋತ್ಸವ

ಕಮಲೋತ್ಸವ

ಕೊಲ್ಕತ್ತಾ, ಮೇ ೪- ಇಡೀ ದೇಶದ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿ ಮಮತಾ ದೀದಿಗೆ ಸೋಲಿನ ರುಚಿ ಉಣಬಡಿಸಿದ್ದಾರೆ. ಇಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಿ ನಳನಳಿಸಿದೆ. ಟಿಎಂಸಿ ಸೋತು ನೆಲಕಚ್ಚಿದೆ.


ಪಶ್ಚಿಮ ಬಂಗಾಳದಲ್ಲಿ ಅಧಿಪತ್ಯ ಸಾಧಿಸಿ ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿಯವರ ಆಳ್ವಿಕೆ ಅಂತ್ಯಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಆಡಳಿತಕ್ಕೆ ಮತದಾರರು ಅಸ್ತು ಎಂದಿದ್ದಾರೆ.


ಪಶ್ವಿಮ ಬಂಗಾಳ ಚುನಾವಣೆ ಗೆಲುವು ಪ್ರಧಾನಿ ಮೋದಿ ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅದರಲ್ಲೂ ಮಮತಾ ಬ್ಯಾನರ್ಜಿ ಅವರಿಗಂತೂ ಈ ಚುನಾವಣೆ ಅವರ ರಾಜಕೀಯ ಅಳಿವು ಉಳಿವನ್ನು ನಿರ್ಧರಿಸುವ ಚುನಾವಣೆ ಎಂದೇ ಹೇಳಲಾಗಿತ್ತು. ಈ ಪ್ರತಿಷ್ಠೆಯ ಹೋರಾಟದ ಕಣದಲ್ಲಿ ಪ್ರಧಾನಿ ಮೋದಿಯವರು ಗೆದ್ದು ಬೀಗಿದ್ದರೆ ಮಮತಾ ದೀದಿ ಸೋತು ಮುಖಭಂಗಕ್ಕೆ ಒಳಗಾಗಿದ್ದಾರೆ.


ಮೊದಲು ಎಡಪಕ್ಷಗಳ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳ ನಂತರ ಮಮತಾ ಬ್ಯಾನರ್ಜಿಯವರ ವಶವಾಗಿತ್ತು. ಈಗ ೧೫ ವರ್ಷಗಳ ನಂತರ ಪಶ್ಚಿಮ ಬಂಗಾಳ ಬಿಜೆಪಿಯ ವಶಕ್ಕೆ ಬಂದಿದೆ. ಇಲ್ಲಿ ಹಲವು ವರ್ಷಗಳ ಆಡಳಿತ ನಡೆಸಿದ್ದ ಎಡಪಕ್ಷಗಳು ಹೇಳ ಹೆಸರಿಲ್ಲದಂತೆ ಮೂಲೆಗೆ ಸರಿದಿವೆ. ಹಾಗೆಯೇ ಚುನಾವಣೆಯಲ್ಲಿ ಮೈತ್ರಿಯಿಲ್ಲದೆ ಒಂಟಿಯಾಗಿ ಸ್ಪಂದಿಸಿದ್ದ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿ ನೆಲಕಚ್ಚಿದೆ.


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದ್ದು, ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗಳಿಸುವ ಲಕ್ಷಣಗಳು ಗೋಚರಿಸಿವೆ. ಪಶ್ಚಿಮ ಬಂಗಾಳ ಮತದಾರರು ಇದೇ ಮೊದಲ ಬಾರಿಗೆ ಕಮಲಕ್ಕೆ ಆಶೀರ್ವಾದ ಮಾಡಿದ್ದು, ಪಶ್ಚಿಮ ಬಂಗಾಳ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಕೈಗೆ ನೀಡಿದ್ದಾರೆ. ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ಕಮಲದ ಆಳ್ವಿಕೆಗೆ ಒಳಪಡಲಿವೆ.


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹುಮತ ಗಳಿಸುವುದು ನಿಶ್ಚಿತವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಪಟ್ಟಕ್ಕೂ ಪೈಪೋಟಿ ಆರಂಭವಾಗಿದ್ದು, ವಿರೋಧ ಪಕ್ಷಗಳ ನಾಯಕರಾದ ಸುವೇಂದು ಅಧಿಕಾರಿ. ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಇವರುಗಳ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿದೆ.

ಫಲ ನೀಡಿದ ತಂತ್ರಗಾರಿಕೆ
ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿಯ ಸೋಲಿಸಿ, ಇಡೀ ದೇಶಕ್ಕೆ ಒಂದು ಸಂದೇಶ ನೀಡುವ ಬಿಜೆಪಿಯ ಉಮೇದಿಗೆ ಪಶ್ಚಿಮ ಬಂಗಾಳ ಗೆಲುವು ದೊಡ್ಡ ಶಕ್ತಿಯನ್ನೇ ತಂದುಕೊಟ್ಟಿದೆ. ಇಲ್ಲಿ ಬಿಜೆಪಿ ತಳಮಟ್ಟದಲ್ಲಿ ರೂಪಿಸಿದ ತಂತ್ರಗಾರಿಕೆ ಫಲ ಕೊಟ್ಟಿದೆ. ಬೂತ್ ಮಟ್ಟದಲ್ಲಿ ಮೊದಲು ಮತದಾನ ನಂತರ ಜಲಪಾನ ನೋಟಾಬೇಡ ಎಂಬ ಅಭಿಯಾನಗಳು ಬಿಜೆಪಿ ಗೆಲುವಿಗೆ ನೆರವಾಗಿದೆ.


ಸಾಮಾನ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಮಧ್ಯಾಹ್ನ ನಂತರ ಮತ ಚಲಾಯಿಸುತ್ತಿದ್ದರು. ಅಷ್ಟೋತ್ತಿಗೆ ಬೆಳಿಗ್ಗೆಯೇ ನಕಲಿ ಮತದಾನ, ಗೂಂಡಾಗಿರಿ ನಡೆದು ಮತದಾರರು ಬೇಸರಗೊಳ್ಳುತ್ತಿದ್ದರು. ಆದರೆ ಬಿಜೆಪಿ ಬೂತ್ ಮಟ್ಟದಲ್ಲಿ ಬೆಳಿಗ್ಗೆಯೇ ಮತ ಹಾಕಿ ತಿಂಡಿ ಆಮೇಲೆ ಎಂಬ ಅಭಿಯಾನ ನಡೆಸಿ, ಬೆಳಿಗ್ಗೆಯೇ ಮತದಾರರು ಮತಗಟ್ಟೆಗೆ ಬರುವಂತೆ ನೋಡಿಕೊಂಡಿತ್ತು. ಹಾಗೆಯೇ ನೋಟಾ ಬೇಡ, ಮತ ವ್ಯರ್ಥ ಮಾಡಬೇಡಿ ಎಂಬ ಅಭಿಯಾನ ನಡೆಸಿ, ಆಡಳಿತ ವ್ಯವಸ್ಥೆ ಬಗ್ಗೆ ಅತೃಪ್ತಿ ಹೊಂದಿದ್ದ ಮತದಾರರು ಎಂದು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು ಎನ್ನಲಾಗಿದೆ. ಬಿಜೆಪಿ ಈ ಗೆಲುವಿನಲ್ಲಿ ತಳಮಟ್ಟ ಕಾರ್ಯಕರ್ತ ಶ್ರಮ, ಸಮಯ ಪ್ರಜ್ಞೆ, ತಂತ್ರಗಾರಿಕೆ ಕೆಲಸ ಮಾಡಿದೆ.


ವಿಜಯೋತ್ಸವ ನಿಷೇಧ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹುಮತ ಗಳಿಸಿ, ಅಧಿಕಾರಿ ಚಿಕ್ಕಾಣಿ ಹಿಡಿಯುವುದು ನಿಶ್ಚಿತವಾಗುತ್ತಿದ್ದಂತೆ ಚುನಾವಣೆ ಆಯೋಗ. ಫಲಿತಾಂಶದ ನಂತರ ವಿಜಯೋತ್ಸವದ ರ್‍ಯಾಲಿ ನಡೆಸುವುದನ್ನು ನಿಷೇಧಿಸಿದೆ.