Home ಜಿಲ್ಲೆ ಕಲಬುರಗಿ ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದ ಪ್ರಜಾಪ್ರಭುತ್ವಕ್ಕೆ ಅಪಾಯ

ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದ ಪ್ರಜಾಪ್ರಭುತ್ವಕ್ಕೆ ಅಪಾಯ

ಕಲಬುರಗಿ,ಮೇ.4-ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ, ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ವತಿಯಿಂದ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರರು ನಿವೃತ್ತ ಪ್ರಾಂಶುಪಾಲರಾದ ಡಾ.ಬಸವರಾಜ ಕುಮನೂರ ಅವರು, ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ. ಚುನಾವಣೆಗಳನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಸಂವಿಧಾನದ 324ನೇ ಅನುಚ್ಛೇದ ಪ್ರಕಾರ ಚುನಾವಣಾ ಆಯೋಗವು ಸ್ವತಂತ್ರವಾದ ಅಧಿಕಾರವನ್ನು ಹೊಂದಿದೆ. ಟಿ.ಎನ್.ಶೇಷನ್ ರವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ದೇಶದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ದೊಡ್ಡ ದೊಡ್ಡ ರಾಜಕಾರಣಿಗಳು ಮುಖ್ಯ ಚುನಾವಣಾ ಆಯುಕ್ತರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಹೆದರುತ್ತಿದ್ದರು. ಟಿ ಎನ್ ಶೇಷನ್ ರವರು ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸುವುದರ ಮುಖಾಂತರ ಚುನಾವಣಾ ಆಯೋಗದ ಘನತೆಯನ್ನು ಹೆಚ್ಚಿಸಿದ್ದರು. ಈಗ ಮತ್ತೊಮ್ಮೆ ದೇಶಕ್ಕೆ ಟಿ.ಎನ್.ಶೇಷನ್ ರಂತಹ ಮುಖ್ಯ ಚುನಾವಣಾ ಆಯುಕ್ತರ ಅಗತ್ಯತೆ ಇದೆ ಎಂದು ತಿಳಿಸಿದರು. ನಾವು ಕೂಡಾ ಪ್ರತಿಯೊಬ್ಬರೂ ಚುನಾವಣೆಗಳಲ್ಲಿ ಹಣ ಹಂಚಲು ಬಂದವರನ್ನು ತಿರಸ್ಕರಿಸುವ ಮೂಲಕ ಮತದ ಮೌಲ್ಯವನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು. ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದ ಪ್ರಾಮಾಣಿಕ ಸಮಾಜ ಸೇವಕರಿಗೆ, ನಿಷ್ಠಾವಂತ ರಾಜಕೀಯ ಕಾರ್ಯಕರ್ತರಿಗೆ, ಸಾಮಾಜಿಕ ಕಳಕಳಿಯುಳ್ಳ ಒಳ್ಳೆಯ ವ್ಯಕ್ತಿಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲಿಕ್ಕೆ ಅವಕಾಶವೇ ಇಲ್ಲದಂತಾಗುತ್ತಿದೆ. ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಲು ಪ್ರಮುಖ ಕಾರಣವಾಗುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಬಿ.ಎಡ್, ಪ್ರಶಿಕ್ಷಣಾರ್ಥಿಗಳಾದ ಕೆ.ಶ್ವೇತಾ, ಧರೇಶ ,ಪ್ರಿಯದರ್ಶಿನಿ, ಸೈಯದ್ ಖಾನ್ ,ಭಾಗ್ಯಶ್ರೀ ಅತ್ಯುತ್ತಮವಾಗಿ ಮಾತನಾಡಿದ್ದಕ್ಕಾಗಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಪ್ರಾಂಶುಪಾಲರಾದ ಡಾ ಲಕ್ಷ್ಮಿಕಾಂತ ಖಣದಾಳ ಅವರು ಮಾತನಾಡುತ್ತಾ ಇತ್ತೀಚಿಗೆ ಎಲ್ಲಾ ಚುನಾವಣೆಗಳಲ್ಲಿ ಹಣ ಹಂಚುವುದು ಅವ್ಯಾಹತವಾಗಿ ಸಾಗುತ್ತಿದ್ದು ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಓಣಿಗಳಲ್ಲಿ ಗ್ರಾಮಗಳಲ್ಲಿ ನಗರಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವುದರಿಂದ ಬದಲಾವಣೆ ತರಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಿಂದ ದೂರವಿದ್ದು ದಿನನಿತ್ಯ ದಿನಪತ್ರಿಕೆಗಳನ್ನು ಓದಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ ಆರ್.ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾನು ಮತದಾರರ ಪಟ್ಟಿಯಲ್ಲಿ ತಪ್ಪದೆ ಹೆಸರನ್ನು ನೋಂದಾಯಿಸುತ್ತೇನೆ.ನಾನು ಚುನಾವಣೆಗಳಲ್ಲಿ ಯಾವುದೇ ಆಸೆ- ಆಮಿಷಗಳಿಗೆ ಬಲಿಯಾಗದೆ ತಪ್ಪದೆ ಮತದಾನ ಮಾಡುತ್ತೇನೆ.ಕ್ರಿಮಿನಲ್ ಆರೋಪ ಹಿನ್ನೆಲೆ ಉಳ್ಳ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ.ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ನನಗೆ ಸಹಿ ಎನಿಸದೆ ಇದ್ದಲ್ಲಿ ನಾನು ನೋಟಾಕ್ಕಾದರೂ ತಪ್ಪದೇ ಮತ ಹಾಕುತ್ತೇನೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಶಿಕ್ಷಣಾರ್ಥಿಗಳಾದ ಅಭಿನಯಾ ಸ್ವಾಗತಿಸಿದರು.ತನುಜಾ ಮಣ್ಣೂರ ನಿರೂಪಿಸಿದರು.ಮೇಘಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.