
ಜಿದ್ದಾಜಿದ್ದಿನ ಆಖಾಡದಲ್ಲಿ ಗೆಲುವಿನ ಮಾಲೆ ಯಾರಿಗೆ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ
ನವದೆಹಲಿ, ಮೇ ೩- ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಈ ೫ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಎದೆಬಡಿತ ಜೋರಾಗಿದೆ.
ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಜಿದ್ದಾಜಿದ್ದಿನ ಅಖಾಡವಾಗಿ ಪರಿಗಣಿಸಿರುವ ಈ ೫ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದು ಅಪಾರ ಕುತೂಹಲ ಕೆರಳಿಸಿದೆ.ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿ ಮತದಾರರ ಮನಗೆಲ್ಲಲು ಕಸರತ್ತು ನಡೆಸಿವೆ. ಆದರೆ ಈಗಾಗಲೇ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು ಎಲ್ಲರ ಚಿತ್ತ ಫಲಿತಾಂಂಸದತ್ತ ಕೇಂದ್ರಿಕೃತವಾಗಿದೆ.
ಚುನಾವಣೆ ಘೋಷಣೆಯಾದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಈ ಚುನಾವಣೆ ಹೆಚ್ಚು ಕುತೂಹಲ ಕೆರಳಿಸಿದೆ.
ಒಟ್ಟು ೨೯೪ ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸವಾಲಾಗಿ ಪರಿಣಮಿಸಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಪಾರುಮತ್ಯ ಮೆರೆದಿದ್ದು, ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಬುಡ ಅಲುಗಾಡಲಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಅಖಾಡದಲ್ಲಿ ಎರಡು ಪಕ್ಷಗಳು ಸೆಡ್ಡು ಹೊಡೆದಿರುವುದರಿಂದ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.
ಮತದಾನ ವೇಳೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಾಳೆ ಮತ ಎಣಿಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನೆರೆಯ ತಮಿಳುನಾಡಿನಲ್ಲೂ ಆಡಳಿತ ರೂಢ ಡಿಎಂಕೆ ಮತ್ತು ಚಿತ್ರನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
೨೩೪ ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಈ ಬಾರಿ ಡಿಎಂಕೆ ಪರ ಎರಡು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಒಂದು ಸಮೀಕ್ಷೆ ವಿಜಯ್ ಪರ ಮತ್ತು ಅಣ್ಣಾ ಡಿಎಂಕೆ ಪರವೂ ಭವಿಷ್ಯ ನುಡಿದಿವೆ.
ಚುನಾವಣಾ ಅಖಾಡದಲ್ಲಿ ತೀವ್ರ ಪೈಪೋಟಿ ನಡೆಸಿದ್ದ ಟಿವಿಕೆ ಕಿಂಗ್ ಮೇಕರ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಗ್ಯಾರಂಟಿಗಳ ಭರವಸೆಯ ಮಹಾಪೂರವನ್ನೇ ಹರಿಸಿತ್ತು. ಹೀಗಾಗಿ ಫಲಿತಾಂಶ ಭಾರೀ
ಕೌತುಕಕ್ಕೆ ಕಾರಣವಾಗಿದೆ.
ತಮಿಳುನಾಡಿನಲ್ಲಿ ಶೇ. ೮೫.೧೦ ರಷ್ಟು ಮತದಾನ ದಾಖಲಾಗಿತ್ತು. ನಾಳೆ ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆ ಕೇಂದ್ರಗಳ ಮುಂದೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
೧೨೬ ಸದಸ್ಯ ಬಲದ ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಬಿಂಬಿಸಿವೆ.
೧೨೬ ಸದಸ್ಯ ಬಲದ ಅಸ್ಸಾಂನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತೀವ್ರ ಕಸರತ್ತು ನಡೆದಿದೆ. ಚುನಾವಣಾ ಮತಗಟ್ಟೆ ಸಮೀಕ್ಷೆಗಳನ್ನು ಕಾಂಗ್ರೆಸ್ ನಂಬುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ೩೦ ಸದಸ್ಯ ಬಲದ ಕೇಂದ್ರಾಡಳಿತ ಪ್ರದೇಶದ ಪುದುಚೇರಿಯಲ್ಲಿ ಎನ್‌ಡಿಎ ಕೂಟದ ಭಾಗವಾಗಿರುವ ಎನ್.ಆರ್. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಕೇರಳ ವಿಧಾನಸಭಾ ಕ್ಷೇತ್ರದ ಫಲಿತಾಂಶವು ಅಪಾರ ಕುತೂಹಲ ಕೆರಳಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಕಂಡು ಬಂದಿದೆ.
ಎಡ ಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಬಿಂಬಿಸಿವೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ವಿಶ್ಲೇಷಿಸಿವೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪೈಪೋಟಿ ನಡೆಸಿದ್ದು, ಆ ಪಕ್ಷದ ಶಕ್ತಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಏನೇ ಇದ್ದರೂ ನಾಳೆ ನಡೆಯುವ ಮತ ಎಣಿಕೆ ಕಾರ್ಯದ ನಂತರ ಗೆಲುವು ಯಾವ ಪಕ್ಷಕ್ಕೆ ಎಂಬ ವಿಚಾರಕ್ಕೆ ತೆರೆ ಬೀಳಲಿದೆ.






















