
ನವದೆಹಲಿ, ಮೇ ೧- ತಿಂಗಳ ಆರಂಭದಲ್ಲೇ ಹೋಟೆಲ್ ಉದ್ಯಮಕ್ಕೆ ದೊಡ್ಡ ಶಾಕ್ ನೀಡಿರುವ ತೈಲ ಕಂಪನಿಗಳು ದೇಶದಾದ್ಯಂತ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಏಕಾಏಕಿ ೯೯೩ ರೂ. ಗಳಿಗೆ ಏರಿಕೆ ಮಾಡಿವೆ. ವಾಣಿಜ್ಯ ಸಿಲಿಂಡರ್ ದರ ದುಬಾರಿಯಾಗಿರುವುದರಿಂದ ಹೋಟೆಲ್ ನ ತಿಂಡಿತಿನಿಸುಗಳ ಬೆಲೆಗಳು ಏರಿಕೆಯಾಗಲಿವೆ. ಹೀಗಾಗಿ ಶ್ರೀಸಾಮಾನ್ಯನ ಜೇಬಿಗೆ ಭಾರೀ ಕತ್ತರಿ ಬೀಳಲಿದೆ.
ಗೃಹ ಬಳಕೆಯ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮಾರ್ಚ್ ೭ ರಂದು ೬೦ ರೂ. ಹೆಚ್ಚಳ ಮಾಡಲಾಗಿತ್ತು. ಈಗ ವಾಣಿಜ್ಯ ಸಿಲಿಂಡರ್ ಮಾತ್ರ ಏರಿಕೆ ಮಾಡಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ವಾಣಿಜ್ಯ ಎಲ್‌ಪಿಜಿ ದರವನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಲಾಗಿದೆ. ಮಾರ್ಚ್ ೧ ರಂದು ೧೪೪ ರೂ. ಏರಿಕೆ ಮಾಡಲಾಗಿತ್ತು. ಏ. ೧ ರಂದು ೧೯ ಕೆಜಿ ವಾಣಿಜ್ಯ ಸಿಲಿಂಡರ್‌ವನ್ನು ೨೦೦ ರೂ. ಹೆಚ್ಚಳಮಾಡಲಾಗಿತ್ತು. ಈಗ ಮತ್ತೆ ೯೯೩ ರೂ.ರಷ್ಟು ಬಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಈ ಹಿಂದೆ ವಾಣಿಜ್ಯ ಸಿಲಿಂಡರ್ ೨,೦೭೮. ೫೦ ಪೈಸೆಯಷ್ಟಿದ್ದ ದರ ಈಗ ೩,೦೭೧.೫ ರೂ. ತಲುಪಿದೆ. ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ಈ ಬೆಲೆ ಏರಿಕೆ ಸಾಮಾನ್ಯ ಜನರ ಮೇಲೂ ಹೊರೆಯಾಗಲಿದ್ದು, ಊಟ , ತಿಂಡಿಗಾಗಿ ಹೋಟೆಲ್ ಅನ್ನು ನೆಚ್ಚಿಕೊಂಡಿರುವವರಿಗೆ ಸಿಲಿಂಡರ್ ದರ ಏರಿಕೆ ಬರೆ ಹಾಕಿದೆ.
ತೈಲ ಮಾರಾಟ ಕಂಪನಿಗಳು ಪ್ರತಿ ೧ನೇ ತಾರೀಕಿನಿಂದು ಎಲ್ ಪಿಜಿ, ಎಟಿಎಫ್ ದರ ಪರಿಷ್ಕರಿಸುತ್ತವೆ. ಪಶ್ಚಿಮ ಏಷ್ಯಾದಲ್ಲಿ ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಉಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಶೇ. ೫೦ ರಷ್ಟು ಹೆಚ್ಚಾಗಿವೆ.
ವಾಣಿಜ್ಯ ಸಿಲಿಂಡರ್‌ನ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ. ಒಫೆಕ್ ಒಕ್ಕೂಟದಿಂದ ಯುಎಇ ಹೊರ ಬರಲು ನಿರ್ಧರಿಸಿರುವುದು ಪ್ರಮುಖ ಕಾರಣವಾಗಿದೆ. ಜಗತ್ತಿನ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಯುಎಇ ಒಕ್ಕೂಟದಿಂದ ಹೊರ ಬಂದರೆ ಭವಿಷ್ಯದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಜೊತೆಗೆ ತೈಲ ಬೆಲೆಗಳು ಹೆಚ್ಚಾಗುತ್ತವೆ ಹಾಗಾಗಿ ಕೇಂದ್ರ ಸರ್ಕಾರ ಗೃಹ ಬಳಕೆ ಎಲ್ ಪಿಜಿ ಮತ್ತು ಪೆಟ್ರೋಲ್, ಡೀಸೆಲ್ ಬಳಕೆದಾರರ ಹಿತವನ್ನು ರಕ್ಷಿಸಲು ತೈಲ ಕಂಪನಿಗಳ ಹೆಚ್ಚಾದ ಹೊರೆಯನ್ನು ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆ ಮೂಲಕ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ.
ವಾಣಿಜ್ಯ ಎಲ್ ಪಿಜಿ ಬೆಲೆ ಏರಿಕೆಯೂ ಹೋಟೆಲ್ ಉದ್ಯಮದ ಜೊತೆಗೆ ಆಸ್ಪತ್ರೆ ಎಲ್ ಪಿಜಿ ಬಳಸುವ ಕೆಲ ಉತ್ಪಾದಕ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆ.
ಹೋಟೆಲ್ ಉದ್ಯಮಕ್ಕೆ ಹೊಡೆತ
ಈ ದರ ಏರಿಕೆ ಹೋಟೆಲ್, ರೆಸ್ಟೋರೆಂಟ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ತಿಂಡಿ-ತಿನಿಸು ಕಾಫೀ, ಟೀ ದರ ಏರಿಕೆಯಾಗಲಿವೆ.
ವಾಣಿಜ್ಯ ಸಿಲಿಂಡರ್ ದರ
೯೯೩ ರೂಗೆ ಏರಿಕೆಯಾದ ಹಿನ್ನೆಲೆ ಹೋಟೆಲ್ ಮಾಲೀಕರು ತೈಲ ಕಂಪನಿಗಳ ಕ್ರಮಕ್ಕೆ ಆಕ್ರೋಶ ಹೊರಹಾಕಿದ್ದಾರೆ. ದರ ಏರಿಕೆಯಿಂದಾಗಿ ಹೊಟೇಲ್ ಉದ್ಯಮ ನಡೆಸೋದು ಬಹಳಷ್ಟು ಕಷ್ಟವಾಗಿದೆ.
ಇದರ ಹೊರೆಯನ್ನು ಜನರ ಮೇಲೆ ಹಾಕಬೇಕಾಗುತ್ತದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಮೇಲೆ ವಿಧಿಸಿರುವ ೧೮% ಜಿಎಸ್‌ಟಿಯನ್ನು ತೆಗೆಯಬೇಕು ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಆಗ್ರಹಿಸಿದ್ದಾರೆ.
ಪ್ರಮುಖ ನಗರಗಳಲ್ಲಿ ೧೯ ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ
ಮುಂಬೈ – ೩೦೨೪ ರೂ.
ಬೆಂಗಳೂರು- ೩೧೫೨ ರೂ.
ನವದೆಹಲಿ- ೩೦೭೧.೫೦ ರೂ.
ಕೊಲ್ಕತ್ತಾ- ೩೨೦೨ ರೂ.
ಚೆನ್ನೈ -೩೨೩೭ ರೂ.
























