
ಕಲಬುರಗಿ,ಮೇ.4-ಬಸವ ಸಮಿತಿ ಅನುಭಾವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಬಸವಾದಿ ಶರಣರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 890ನೆಯ ದತ್ತಿ ಕಾರ್ಯಕ್ರಮದಲ್ಲಿ ಷಟಸ್ಥಲ ಯಾತ್ರೆ ಮಾನವ ಪ್ರಜ್ಞೆಯ ಉನ್ನತಿಯ ಕಡೆಗೆ ವಿಷಯದ ಕುರಿತು ಅನುಭಾವ ನೀಡಿದ ಸರಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಭಾರತಿ ಹುಳಗೋಳ ಅವರು ಮಾತನಾಡಿ ಷಟಸ್ಥಲಗಳು ಮಾನವನ ಉನ್ನತಿಗೆ ಕ್ರಮಿಸುವ ಆರು ಹಂತಗಳಾಗಿವೆ ಎಂದರು . ಭಕ್ತಸ್ಥಲ ಜಾಗೃತಿಯ ಹಂತವಾಗಿದೆ, ಮಹೇಶ್ವರ ಹಂತವೆಂದರೆ ಆಂತರಂಗಿಕ ಶುದ್ಧಿಯಾಗಿದೆ .ಪ್ರಸಾದಿ ಹಂತ ಅನುಗ್ರಹದ ಹಂತವಾಗಿದೆ .ಪ್ರಾಣಲಿಂಗಿ ಹಂತ ಅಸಾಧಾರಣವಾದುದನ್ನು ಬಯಸುತ್ತದೆ .ನಾವು ದೈವಿ ಸ್ವರೂಪ ಎಂಬ ಭಾವ ಬಲಿಯುತ್ತದೆ . ಅಂತರಂಗದಲ್ಲಿ ದೇವರಿದ್ದಾನೆ ಎಂಬ ಭಾವ ಗಟ್ಟಿಗೊಳ್ಳುವ ಹಂತವಾಗಿದೆ. ಶರಣಸ್ಥಲವೆಂದರೆ ಶರಣಾಗತಿಯ ಹಂತವಾಗಿದೆ . ಇದು ಅಹಂಕಾರ ತೊರೆದ ಹಂತವಾಗಿದೆ .ಐಕ್ಯಸ್ಥಲವೆಂದರೆ ಪ್ರತಿಯೊಂದರಲ್ಲಿ ದೇವರನ್ನು ಕಾಣುವ ಹಂತವಾಗಿದೆ . ಷಟಸ್ಥಲವೆಂದರೆ ನಿರ್ಭೀತವಾಗಿ ಮಾನವನಾಗುವ ಮತ್ತು ದೇವನಾಗುವ ಹಂತಗಳೇ ಆಗಿವೆ . ಇವು ಕೇವಲ ಲಿಂಗಾಯತ ಧರ್ಮದ ಆಚರಣೆಗಳಲ್ಲ , ಪ್ರತಿಯೊಬ್ಬ ಮಾನವನು ಪಾಲಿಸಬೇಕಾದ ಆಚರಣೆಗಳಾಗಿವೆ .ಐಕ್ಯಸ್ಥಲ ವೆಂದರೆ ಲಿಂಗವೇ ತಾನಾಗುವ ,ಮಾನವನೇ ದೇವನಾಗುವ ಹಂತವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ ,ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ ಉದ್ಯಮಿ ರಾಜೇಂದ್ರ ಕೂಬಾ,ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ , ಡಾ.ಕೆ. ಎಸ್. ವಾಲಿ , ಶರಣಗೌಡ ಪಾಟೀಲ್ ಪಾಳ , ಉದ್ದಂಡಯ್ಯ ಭಾಗವಹಿಸಿದರು. ಸಾಕ್ಷಿ ಸತ್ಯಂಪೇಟ ನಿರೂಪಿಸಿದರು.






















