
ಹುಬ್ಬಳ್ಳಿ,ಸೆ.೨೭: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ೧೧ ದಿನದ ಬದಲಾಗಿ ೧೨ ನೇ ದಿನ ನಡೆದ ನೂರಾರು ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿ ಕುಣಿದು ಕುಪ್ಪಳಿಸಿದರು.
೬ ಗಂಟೆ ಸುಮಾರಿಗೆ ಹಂತ ಹಂತವಾಗಿ ಪ್ರಾರಂಭವಾದ ಮೆರವಣಿಗೆ ಮಧ್ಯ ರಾತ್ರಿ ೧೨ ಗಂಟೆ ಸುಮಾರಿಗೆ ರಂಗು ಪಡೆಯಿತು. ನಗರ ಅಲ್ಲದೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿ ಜನರು ಗಣೇಶ ಮೆರವಣಿಗೆಯ ಡಿಜೆ ಸದ್ದಿಗೆ ಕುಣಿದರು.
ಪ್ರಮುಖ ಆಕರ್ಷಣೆಯಾದ’ ದಾಜಿಬಾನ್‌ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’ ಮರಾಠಾ ಗಲ್ಲಿಯ “ಹುಬ್ಬಳ್ಳಿ ಚಾ ಮಹಾರಾಜಾ” ಗಣಪತಿ ಸೇರಿದಂತೆ ೧೦೦ಕ್ಕೂ ಹೆಚ್ಚು ಸಾರ್ವಜನಿಕ ಮೂರ್ತಿಗಳ ಮುಂದೆ ಜನಸಾಗರವೇ ಸೇರಿತ್ತು ೨೫ ಅಡಿ ಎತ್ತರದ ‘ಹುಬ್ಬಳ್ಳಿ ಕಾ ರಾಜಾ’ ಸೇರಿದಂತೆ ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆಯು ದುರ್ಗದಬೈಲ್‌ನಿಂದ ಪ್ರಾರಂಭವಾಗಿ ಬ್ರಾಡ್ ವೇ, ಮರಾಠಾಗಲ್ಲಿ ಕ್ರಾಸ್, ಮೇದಾರ ಓಣಿ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ವೃತ್ತ, ಕ್ಲಬ್ ಹರಸ್ತೆ ಮೂಲಕ ಹೊಸೂರ ವೃತ್ತದವರೆಗೆ ಸಾಗಿತು. ಬಳಿಕ ಹೊಸೂರು ಬಾವಿಯಲ್ಲಿ ಮೂರ್ತಿಗಳ ವಿಸರ್ಜನೆ ನಡೆದರೆ, ಉಳಿದವು ನಿಲಿಜಿನ್ ರಸ್ತೆ ಮೂಲಕ ಇಂದಿರಾ ಗಾಜಿನ ಮನೆ ಬಾವಿ ಹಾಗೂ ಹೊಸೂರ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.






















