
ಕಲಬುರಗಿ : ಶ್ರೇಷ್ಠ ಸಂಪತ್ತಾದ ಜ್ಞಾನವನ್ನು ಓದುಗರಿಗೆ ನೀಡುವ ಪುಸ್ತಕಗಳ ಸಂಗ್ರಹಾಲಯವಾದ ಗ್ರಂಥಾಲಯಗಳು ಜ್ಞಾನದ ಕಣಜಗಳಾಗಿವೆ. ಎಲ್ಲಾ ಗ್ರಂಥಗಳನ್ನು ಸುರಕ್ಷಿತವಾಗಿ ಕಾಪಾಡಿ, ಓದುಗರಿಗೆ ಜ್ಞಾನವನ್ನು ಉಣಬಡಿಸುವ ಗ್ರಂಥಪಾಲಕರ ಸೇವೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀμï ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ರಾಷ್ಟ್ರೀಯ ಗ್ರಂಥಾಲಯ ಮತ್ತು ಗ್ರಂಥಪಾಲಕರ ದಿನಾಚರಣೆ”ಯನ್ನು ‘ಗ್ರಂಥಾಲಯ ವಿಜ್ಞಾನ ಪಿತಾಮಹ’ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ದಿನ’ವನ್ನು ಪ್ರತಿ ವರ್ಷ ‘ಆಗಸ್ಟ್-12’ ರಂದು ಆಚರಿಸಲಾಗುತ್ತದೆ.ಈ ದಿನವನ್ನು ಡಾ. ಎಸ್.ಆರ್. ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಗ್ರಂಥಾಲಯಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯಲು ಆಚರಿಸಲಾಗುತ್ತದೆ. ಗ್ರಂಥಾಲಯಗಳು ಜ್ಞಾನದ ಕೇಂದ್ರಗಳಾಗಿವೆ ಮತ್ತು ಸಮಾಜದ ಪ್ರಗತಿಗೆ ಅತ್ಯಗತ್ಯವಾಗಿವೆ. ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯ ಹಾಗೂ ಗ್ರಂಥಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ನುಡಿದರು.
ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ. ಇಂತಹ ಜ್ಞಾನದೇಗುಲವೇ ಗ್ರಂಥಾಲಯವಾಗಿವೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಜನರು ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಚಿಂತಕ ಶಿವಯೋಗೆಪ್ಪಾ ಎಸ್. ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






























