Home ಜಿಲ್ಲೆ ತುಮಕೂರು ವಿಕಿಪೀಡಿಯದಲ್ಲಿ ಮಹಿಳಾ ಪರ ಮಾಹಿತಿ ಹೆಚ್ಚಾಗಲಿ: ಡಾ. ಪವನಜ

ವಿಕಿಪೀಡಿಯದಲ್ಲಿ ಮಹಿಳಾ ಪರ ಮಾಹಿತಿ ಹೆಚ್ಚಾಗಲಿ: ಡಾ. ಪವನಜ

ತುಮಕೂರು, ನ. ೨೭- ವಿಕಿಪೀಡಿಯದಲ್ಲಿ ಮಹಿಳಾ ಸಂಪಾದಕರ ಪಾಲ್ಗೊಳ್ಳುವಿಕೆ ಕಡಿಮೆಯಿದ್ದು, ಮಹಿಳಾ ಸಾಧಕಿಯರ ಕುರಿತ ಮಾಹಿತಿಯೂ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಿಲ್ಲ. ಈ ಕೊರತೆಯನ್ನು ನೀಗಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ವಿಜ್ಞಾನಿ ಹಾಗೂ ಕನ್ನಡದ ಮೊದಲ ಜಾಲತಾಣದ ಸ್ಥಾಪಕ ಡಾ. ಯು.ಬಿ. ಪವನಜ ಹೇಳಿದರು.


ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಕರಾವಳಿ ವಿಕಿಮೀಡಿಯನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ’ಕನ್ನಡ ವಿಕಿಪೀಡಿಯ ಕಾರ್ಯಾಗಾರ ಹಾಗೂ ಮಹಿಳಾಪರ ಸಂಪಾದನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ವಿಷಯ ಜ್ಞಾನ, ಮಾಹಿತಿ ಜ್ಞಾನ ಹಾಗೂ ಭಾಷಾ ಜ್ಞಾನ ಅತ್ಯಗತ್ಯ. ಕೇವಲ ಭಾಷಾಂತರ ಮಾಡುವುದಷ್ಟೇ ಅನುವಾದವಲ್ಲ, ವಿಷಯದ ಹಿನ್ನೆಲೆ ಮತ್ತು ಅದರ ನಿಖರತೆಯನ್ನು ಅರಿತುಕೊಂಡು ಅರ್ಥಪೂರ್ಣವಾಗಿ ಅನುವಾದಿಸಬೇಕು. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಜ್ಞಾನ ಸಂಪತ್ತಿನ ವಿಸ್ತರಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಬೇಕು. ಡಿಜಿಟಲ್ ಜಗತ್ತಿನಲ್ಲಿ ಮಹಿಳೆಯರ ಸಾಧನೆ, ಚಿಂತನೆ, ಸಂಶೋಧನೆ ಮತ್ತು ಕೊಡುಗೆಗಳಿಗೆ ಸೂಕ್ತ ಸ್ಥಾನ ಕಲ್ಪಿಸುವಲ್ಲಿ ವಿಕಿಪೀಡಿಯ ಸಂಪಾದನೋತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಮಾಹಿತಿ ಸಂಪತ್ತು ಅತ್ಯಗತ್ಯ. ಜನರಿಂದ, ಜನರಿಗಾಗಿ, ಜನರೇ ಬೆಳೆಸುವ ಮುಕ್ತ ಜ್ಞಾನಕೋಶವೇ ವಿಕಿಪೀಡಿಯ ಎಂದು ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಪರಮಶಿವಯ್ಯ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಜ್ಞಾನ ಸಂಪಾದನೆ ಮತ್ತು ಹಂಚಿಕೆ ಡಿಜಿಟಲ್ ಮಾಧ್ಯಮಗಳ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ವಿಕಿಪೀಡಿಯ ಸಂಪಾದನೆಯ ತಾಂತ್ರಿಕ ಕೌಶಲಗಳನ್ನು ಕಲಿತುಕೊಳ್ಳಬೇಕು. ಕೇವಲ ಮಾಹಿತಿಯ ಬಳಕೆದಾರರಾಗದೆ, ವಿಶ್ವಾಸಾರ್ಹ ಮಾಹಿತಿಯನ್ನು ಸೃಷ್ಟಿಸುವವರಾಗಬೇಕು ಎಂದರು.


ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ. ಸಿಬಂತಿ ಪದ್ಮನಾಭ ಕೆ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಜ್ಞಾ ದೇವಾಡಿಗ, ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ಡಾ. ಸುಲೋಚನ ಜಿ.ಎಸ್., ಡಾ. ಗಿರಿಜಮ್ಮ, ವಿಷ್ಣುಧರನ್ ಹಾಗೂ ತನುಶ್ರೀ ಮತ್ತಿತರುರ ಭಾಗವಹಿಸಿದ್ದರು.


ಈಶ್ವರಿ ವಿ. ಕಾರ್ಯಕ್ರಮ ನಿರೂಪಿಸಿದರು.