
ಕಲಬುರಗಿ: ದೇಶದ ಪ್ರತಿಯೊಬ್ಬ ನಾಗರಿಕನಲ್ಲಿ ರಾಷ್ಟ್ರೀಯ ಹೆಮ್ಮೆ, ಐಕ್ಯತೆ ಹಾಗೂ ದೇಶಪ್ರೇಮದ ಭಾವನೆ ಮೂಡಿಸುವ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಜಾತಿ, ಮತ, ಭೇದ-ಭಾವ ಮರೆತು ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶರಣಕುಮಾರ ಎಮ್.ಹಾಗರಗುಂಡಗಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಆಗಸ್ಟ್ ೯ ರಿಂದ ೧೭ ರವರೆಗೆ ದೇಶಾದ್ಯಂತ ನಡೆಯಲಿರುವ ಈ ಮಹೋತ್ಸವದಲ್ಲಿ ಪ್ರತಿಯೊಂದು ಮನೆಯ ಮೇಲೆಯೂ ರಾಷ್ಟ್ರಧ್ವಜ ಗಗನ ಚುಂಬಿಯಾಗಿ ಹಾರಾಡಲಿ.ಈ ಬಾರಿಯ ಕಾರ್ಯಕ್ರಮ ಅತ್ಯಂತ ವಿಶೇಷತೆಯಿಂದ ಕೂಡಿ-ದೆ. ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷಗಳು ತುಂಬುತ್ತಿರುವ ಈ ಸುಸಂದರ್ಭದಲ್ಲಿ, ಈ ವರ್ಷದ ಅಭಿಯಾನವನ್ನು ಈ ಅಮರ ಗೀತೆಗೆ ಅರ್ಪಿಸಲಾಗಿದೆ. ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸವನ್ನು ಸ್ಮರಿಸುವ ಈ ವೇಳೆಯಲ್ಲಿ, ನಮ್ಮ ಹೆಮ್ಮೆಯ ಸಂಕೇತವಾದ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.ನಮ್ಮ ರಾಷ್ಟ್ರಧ್ವಜವು ಭಾರತದ ಸಮಗ್ರತೆ ಹಾಗೂ ಲಕ್ಷಾಂತರ ವೀರರ ಅಪ್ರತಿಮ ತ್ಯಾಗದ ಸಂಕೇತವಾಗಿದೆ. ಸ್ವಾತಂತ್ರ‍್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಮರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಗಡಿಯಲ್ಲಿ ಹಗಲಿರುಳು ದೇಶ ಕಾಯುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಪವಿತ್ರ ಕರ್ತವ್ಯ. ಈ ಅಭಿಯಾನದ ಮೂಲಕ ನಾವೆಲ್ಲರೂ ಒಂದಾಗಿ ಭಾರತ ಮಾತೆಯ ಚರಣಗಳಿಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸೋಣ ಎಂದು ಅವರು ಕೋರಿದ್ದಾರೆ.






























