Home ಜಿಲ್ಲೆ ಪುಸ್ತಕಗಳು ದಿನನಿತ್ಯದ ಗೆಳೆಯರಾಗಲಿ: ಕುಲಸಚಿವ ಸೋಮಲಿಂಗ ಗೆಣ್ಣೂರ

ಪುಸ್ತಕಗಳು ದಿನನಿತ್ಯದ ಗೆಳೆಯರಾಗಲಿ: ಕುಲಸಚಿವ ಸೋಮಲಿಂಗ ಗೆಣ್ಣೂರ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ.೧೫: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು. ಪುಸ್ತಕಗಳೊಂದಿಗಿನ ಒಡನಾಟದಿಂದ ಕೇವಲ ಜೀವಿಯಾಗಿರುವ ಮನುಷ್ಯನಲ್ಲಿ ಮಾನವೀಯತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆದು ಆತ ನಿಜವಾದ ಮನುಷ್ಯನಾಗಿ ರೂಪುಗೊಳ್ಳಲು ಸಾಧ್ಯ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ವಿಜಯಪುರ ಜಿಲ್ಲೆಯ ಮಾಜಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ವಿಜಯಪುರದ ನವರಸಪುರದಲ್ಲಿರುವ ನೇತ್ರ ತಜ್ಞ ಡಾ. ಪ್ರಕಾಶ ಪರಣಾಕರ ಅವರ ನಿವಾಸದಲ್ಲಿ ಭಾನುವಾರ ನಡೆದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರತಿಯೊಂದು ಉತ್ತಮ ಪುಸ್ತಕದೊಳಗೂ ನಮ್ಮೊಂದಿಗೆ ಸಂವಾದ ನಡೆಸುವ ಒಂದು ವ್ಯಕ್ತಿತ್ವ ಮತ್ತು ಮನಸ್ಸು ಅಡಗಿರುತ್ತದೆ ಎಂದರು.
ದಿಕ್ಕು ತಪ್ಪಿಸುವ, ಮೌಢ್ಯ ಹಾಗೂ ಕಂದಾಚಾರವನ್ನು ಬಿತ್ತುವ ಪುಸ್ತಕಗಳನ್ನು ದೂರವಿಟ್ಟು, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಮನೆಯಲ್ಲೂ ಪುಸ್ತಕಗಳಿಗೆ ಸ್ಥಾನ ಕಲ್ಪಿಸುವ ಮೂಲಕ ಜ್ಞಾನಸಂಪನ್ನ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಒಂದು ಉತ್ತಮ ಪುಸ್ತಕ ಓದುವುದು ಎಂದರೆ ಬಸವಣ್ಣನ ಸಮಸಮಾಜದ ಆಶಯವನ್ನು ಮುನ್ನಡೆಸುವ ಪ್ರಯತ್ನದಂತಾಗಿದೆ. ಪುಸ್ತಕ ಓದುವ ಅನುಭವವು ಹೊಸ ಜಗತ್ತಿನ ಪರಿಚಯ ಮಾಡಿಕೊಡುವುದರ ಜೊತೆಗೆ, ಸಹೃದಯರೊಂದಿಗೆ ಕೈಗೊಳ್ಳುವ ಜ್ಞಾನಯಾತ್ರೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಪ್ರೊ. ಬಸವರಾಜ ಜಾಲವಾದಿ ಮಾತನಾಡಿ, ‘ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನಗಳನ್ನು ಕಾಣಬಲ್ಲ; ಪುಸ್ತಕ ಓದದವನು ಒಂದು ಜನ್ಮದಲ್ಲಿ ಒಂದೇ ಜೀವನವನ್ನು ಅನುಭವಿಸಬಲ್ಲ’ ಎಂಬ ಮಾತನ್ನು ಉಲ್ಲೇಖಿಸಿ ಪುಸ್ತಕ ಓದಿನ ಮಹತ್ವವನ್ನು ವಿವರಿಸಿದರು.
ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರ ಚಿಂತನೆಗಳು ಪುಸ್ತಕಗಳ ಓದಿನಿಂದ ಮತ್ತಷ್ಟು ವಿಸ್ತಾರಗೊಂಡವು. ‘ಇವನಾರವ, ಇವನಾರವ’ ಎನ್ನದೆ ‘ಇವ ನಮ್ಮವ, ಇವ ನಮ್ಮವ’ ಎಂಬ ಸಮಾನತೆಯ ಮನೋಭಾವ ಬೆಳೆಸುವುದೇ ಓದಿನ ಸಾರ್ಥಕತೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಆಶೀರ್ವಚನ ನೀಡಿದ ಕಕಮರಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು, ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವು ಆದರ್ಶಪ್ರಾಯವಾಗಿದ್ದು, ಪ್ರತಿಯೊಂದು ಮನೆಯಲ್ಲೂ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಪುಸ್ತಕಗಳ ಮೇಲಿನ ಪ್ರೀತಿ ಮತ್ತು ಓದುವ ಹವ್ಯಾಸವನ್ನು ಬೆಳೆಸುವ ಮೂಲಕ ಸಮಾಜವನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯಬಹುದು ಎಂದರು.
ವೇದಿಕೆಯಲ್ಲಿ ಯರಡೋಣದ ಕುಮಾರೇಶ್ವರ ಸ್ವಾಮಿಗಳು, ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಹಂಜಗಿ, ಶ್ರೀಧರ ಮುರಾಳೆ, ಕಬ್ಬೂರಿನ ಬಾಬೂರಾವ್ ಮಹಾರಾಜ್ ಹಾಗೂ ಆಸ್ಟ್ರೇಲಿಯಾದಿಂದ ಆಗಮಿಸಿ ವಚನ ಪಠಣ ಮಾಡಿದ ವೀರೇಶ ಹಿರೇಮಠ ಉಪಸ್ಥಿತರಿದ್ದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬಸವರಾಜ ಸಾಲವಾಡಗಿ ಕಾರ್ಯಕ್ರಮ ನಿರ್ವಹಿಸಿದರು. ಸಹಪ್ರಾಧ್ಯಾಪಕ ಬಸವರಾಜ ಬೆಳಗಲಿ ವಚನ ಗಾಯನದ ಮೂಲಕ ಸ್ವಾಗತಿಸಿದರು. ಸಿದ್ಧಾರ್ಥ ಪರಣಾಕರ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಡಾ. ಪ್ರಕಾಶ ಪರಣಾಕರ ಹಾಗೂ ಅವರ ಪತ್ನಿಯನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.