Home ಜಿಲ್ಲೆ ಬೆಂಗಳೂರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಸೇವೆಗೆ ಚಾಲನೆ

ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಸೇವೆಗೆ ಚಾಲನೆ

ಕೋಲಾರ,ಆ,೧೫- ಕೋಲಾರಮ್ಮ ದೇವಿಯು ಕೇವಲ ಕೋಲಾರ ಜಿಲ್ಲೆಯಷ್ಟೇ ಅಲ್ಲದೆ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಲಕ್ಷಾಂತರ ಭಕ್ತರ ಶಕ್ತಿ ಕೇಂದ್ರವಾಗಿದೆ ಎಂದು ಕೋಲಾರಮ್ಮ ಸೇವಾ ಸಮಿತಿಯ ನರೇಂದ್ರ ಬಾಬು (ಗಂಗಣ್ಣ) ತಿಳಿಸಿದರು.


ನಗರದ ಐತಿಹಾಸಿಕ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಸಾದ ವಿನಿಯೋಗ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿ,ಕೋಲಾರದ ಅಧಿದೇವತೆ ಹಾಗೂ ನಾಡಿನ ಪ್ರಸಿದ್ಧ ಶಕ್ತಿ ದೇವತೆಯಾದ ಶ್ರೀ ಕೋಲಾರಮ್ಮ ದೇವಿ ದೇವಾಲಯದ ಆವರಣದಲ್ಲಿ ಪ್ರತಿ ಶುಕ್ರವಾರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಕೋಲಾರಮ್ಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.


ಇತ್ತೀಚೆಗೆ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಯ ವಿಶೇಷ ಮುತುವರ್ಜಿಯಿಂದ ದೇವಾಲಯಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೇವಾಲಯದ ಸೌಂದರ್ಯಕರಣದಿಂದಾಗಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಪ್ರಮುಖ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ ಎಂದರು.


ಪ್ರತಿ ಶುಕ್ರವಾರ ಸೇವಾ ಸಮಿತಿ ಸದಸ್ಯರೆಲ್ಲಾ ಸೇರಿ ಬಳಿಗ್ಗೆ ೯ ರಿಂದ ಮಧ್ಯಾಹ್ನ ೧:೩೦ರವರೆಗೆ ದೇವಿಯ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತಾದಿಗೂ ಶುಚಿ-ರುಚಿಯಾದ ಪ್ರಸಾದ ಸಿಗಬೇಕು ಎಂಬುದು ಸಮಿತಿಯ ಆಶಯವಾಗಿದೆ. ಆದ್ದರಿಂದ ಕೋಲಾರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಭಕ್ತಾದಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೋಲಾರಮ್ಮ ದೇವಿಯ ಕೃಪಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಗೋವಿಂದರಾಜು ಅಮರನಾಥ್ ಕೆ.ಟಿ, ನಗರಸಭ ಸದಸ್ಯ ಅಮರನಾಥ್, ಶಿಕ್ಷಣ ಸುಧಾರಣಾ ಸಮಿತಿ ಉಪಾಧ್ಯಕ್ಷ ಕಠಾರಿಪಾಳ್ಯ ಬಾಲಸುಬ್ರಮಣ್ಯ (ಬಾಲು), ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಕೋಟೆ ಬಿ.ಟಿ ಚಂದ್ರಶೇಖರ್, ನಗರಸಸಭೆ ಸದಸ್ಯ ಅಂಬರೀಷ್, ಗಂಗಮ್ಮನ ಪಾಳ್ಯ ರಾಮಯ್ಯ, ಕಿಶೋರ್, ಸಾಗರ್, ಮಹೇಶ್ ಸೇರಿದಂತೆ ದೇವಾಲಯ ಸೇವಾ ಸಮಿತಿಯ ಸದಸ್ಯರು, ಸ್ಥಳಯ ಮುಖಂಡರು ಹಾಗೂ ಅಪಾರ ಸಂಖ್ಯಯ ಭಕ್ತಾಧಿಗಳು ಉಪಸ್ಥಿತರಿದ್ದು ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.