ಕೋಲಾರ,ಜು,೧-ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಕ್ರಮಕ್ಕೆ ಇಂದು ಜಿಲ್ಲೆಯಲ್ಲಿ ಅಧಿಕೃತ ಚಾಲನೆ ದೊರೆಯಿತು.
ಪರಿಷ್ಕರಣಾ ಅಭಿಯಾನದ ಮೊದಲ ದಿನವಾದ ಇಂದು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಖುದ್ದಾಗಿ ಮತದಾರರ ಮನೆಗೆ ಭೇಟಿ ನೀಡಿ ಫಾರ್ಮ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತೆಯೇ ಗಣತಿ ಫಾರ್ಮ್ ವಿತರಿಸಲಾಗುತ್ತಿರುವ ಕುರಿತು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಕೋಲಾರ ನಗರದಲ್ಲಿ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮತದಾರರ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಗಣತಿ ನಮೂನೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆಗಾಗಿ ಈ ಪರಿಷ್ಕರಣೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಮತದಾರರು ತಮ್ಮ ವಿವರಗಳನ್ನು ನಮೂನೆಗಳಲ್ಲಿ ಸರಿಯಾಗಿ ಭರ್ತಿ ಮಾಡುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರಲ್ಲದೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೋಲಾರ ನಗರಸಭೆ ಆಯುಕ್ತ ವೆಂಕಟೇಶ್, ರಾಜಸ್ವ ನಿರೀಕ್ಷಕ ರಾಜೇಂದ್ರ ಪ್ರಸಾದ್, ನಗರಸಭೆಯ ಹಿರಿಯ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
































