
ಬೆಂಗಳೂರು, ಸೆ. ೨೬ : ಸಾಂಸ್ಕೃತಿಕ ನಗರಿ ಬೆಂಗಳೂರಿನಲ್ಲಿ ಮತ್ತೊಂದು ಮನಮೋಹಕ ನೃತ್ಯ ಕಲಾ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ. ಪೂನಂ ಎಸ್ ಮತ್ತು ಕಿರಣ್ ಎಂ.ಕೆ. ಅವರ ಮಗಳಾದ ಕುಮಾರಿ ಅಗ್ರತಾ ಕೆ. ಕಾಶಿದ್ ಅವರ ‘ಭರತನಾಟ್ಯ ರಂಗಪ್ರವೇಶ’ ಕಾರ್ಯಕ್ರಮವನ್ನು ‘ಭರತಾಂಜಲಿ ನಾಟ್ಯ ಶಾಲೆ’ ಯ ಆಶ್ರಯದಲ್ಲಿ ಏರ್ಪಡಿಸಲಾಗಿದೆ.
ಈ ಸಾಂಸ್ಕೃತಿಕ ನೃತ್ಯ ವೈಭವವು, ನಾಳೆ ಬೆಳಿಗ್ಗೆ ೧೦:೧೫ ಕ್ಕೆ ಚೌಡಯ್ಯ ಸ್ಮಾರಕ ಭವನದ ಹಿಂಭಾಗದಲ್ಲಿರುವ ‘ತೆಲುಗು ವಿಜ್ಞಾನ ಸಮಿತಿ’ ಸಭಾಂಗಣದಲ್ಲಿ ನಡೆಯಲಿದೆ.
ಗುರು ಸೀತಾ ಗುರುಪ್ರಸಾದ್ ಅವರ ಮಾರ್ಗದರ್ಶನ ಹಾಗೂ ವಿದುಷಿ ಕುಮಾರಿ ಭುವನಾ ಜಿ. ಪ್ರಸಾದ್ ಅವರ ಶಿಕ್ಷಣದಲ್ಲಿ ಪಾರಂಗತರಾಗಿರುವ ಯುವ ನೃತ್ಯಪಟು ಕುಮಾರಿ ಅಗ್ರತಾ ಕೆ. ಕಾಶಿದ್ ಅವರು ತಮ್ಮ ರಂಗಪ್ರವೇಶದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದ್ದಾರೆ.
ಈ ಕಲಾತ್ಮಕ ಸಮಾರಂಭಕ್ಕೆ ‘ಭಾರತ ಕಲಾ ಗ್ರಾಮ ನಾಟ್ಯ ಗುರುಕುಲಂ’ನ ಅಧ್ಯಕ್ಷರು ಹಾಗೂ ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ’ಯ ಸದಸ್ಯರಾಗಿರುವ ಡಾ. ವಸಂತ್ ಕಿರಣ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೃತ್ಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ವಿದ್ವಾನ್ ಡಿ.ಎಸ್. ಶ್ರೀವತ್ಸ ಅವರ ಹಾಡುಗಾರಿಕೆ (ವೋಕಲ್), ವಿದುಷಿ ಭುವನಾ ಜಿ. ಪ್ರಸಾದ್ ಅವರ ನಟ್ಟುವಾಂಗ, ವಿದ್ವಾನ್ ಶ್ರೀಹರಿ ರಂಗಸ್ವಾಮಿ ಅವರ ಮೃದಂಗ, ವಿದ್ವಾನ್ ಮಹೇಶ ಸ್ವಾಮಿ ಅವರ ಕೊಳಲು (ಫ್ಲೂಟ್), ವಿದ್ವಾನ್ ಪ್ರದೇಶ್ ಆಚಾರ್ ಅವರ ಪಿಟೀಲು (ವಯಲಿನ್), ವಿದ್ವಾನ್ ಕಾರ್ತಿಕ್ ದಾತಾರ್ ಅವರ ರಿದಮ್ ಪ್ಯಾಡ್ಸ್, ಅಲ್ಲದೆ, ಸುಗ್ಗನಹಳ್ಳಿ ಶಡಕ್ಷರಿ ಅವರ ನಿರೂಪಣೆ, ಕಲಾಯೋಗಿ ಸತೀಶ್ ಬಾಬು ಅವರ ರಂಗಾಲಂಕಾರ/ಪ್ರಸಾದನ ಹಾಗೂ ಭರತಾಂಜಲಿ ಕಾಸ್ಟ್ಯೂಮ್ಸ್ ಅವರ ವಸ್ತ್ರಾಲಂಕಾರ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿದ್ದು, ಪ್ರಖ್ಯಾತ ಸಂಗೀತ ವಿದ್ವಾಂಸರ ತಂಡವೇ ಸಾಥ್ ನೀಡಲಿದೆ.
ಈ ಅಪರೂಪದ ಕಲಾ ವೈಭವಕ್ಕೆ ಕಲಾಪ್ರೇಮಿಗಳು, ಬಂಧು-ಮಿತ್ರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೃತ್ಯಪಟುವನ್ನು ಹಾರೈಸಬೇಕಾಗಿ ಭರತಾಂಜಲಿ ನಾಟ್ಯ ಶಾಲೆಯ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

























