Home ಜಿಲ್ಲೆ ಬೆಂಗಳೂರು ೩ ದಿನ ಬ್ಯಾಂಕ್ ಮುಷ್ಕರ : ಎಟಿಎಂಗೆ ಸೇವೆಗೆ ಶುಲ್ಕ ವಿನಾಯಿತಿ

೩ ದಿನ ಬ್ಯಾಂಕ್ ಮುಷ್ಕರ : ಎಟಿಎಂಗೆ ಸೇವೆಗೆ ಶುಲ್ಕ ವಿನಾಯಿತಿ

ಬೆಂಗಳೂರು, ಸೆ.೨೬ – ವಾರಕ್ಕೆ ೫ ದಿನ ಕೆಲಸದ ಅವಧಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆ.೨೮ರಿಂದ ೩೦ ರ ತನಕ ೩ ದಿನ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಅವಧಿಯಲ್ಲಿ ಗ್ರಾಹಕರು ಎಟಿಎಂ ವ್ಯವಹಾರಗಳಿಗೆ ಶುಲ್ಕ ವಿನಾಯಿತಿ ನೀಡಲು ಇಂಡಿಯನ್ ಬ್ಯಾಂಕ್, ಎಸ್ ಬಿಐ, ಯೂನಿಯನ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ತೀರ್ಮಾನಿಸಿವೆ.
ಮುಷ್ಕರದ ಸಂದರ್ಭದಲ್ಲಿ ಗ್ರಾಹಕರಿಗೆ ಹಣದ ಕೊರತೆ ಉಂಟಾಗದಂತೆ ಎಟಿಎಂ ಸೇವೆಗಳನ್ನು ನಿರಂತರವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಗ್ರಾಹಕರಿಗೆ ಈ ಅವಧಿಯಲ್ಲಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಬ್ಯಾಂಕ್ ಗಳು ಈ ಕ್ರಮ ಕೈಗೊಂಡಿವೆ. ಹೀಗಾಗಿ ಈ ಮುಷ್ಕರದ ಅವಧಿಯಲ್ಲಿ ಗ್ರಾಹಕರು ಎಷ್ಟು ಬೇಕಿದ್ದರೂ ಅಷ್ಟು ಸಲ ಹಣ ಡ್ರಾ ಮಾಡಿಕೊಳ್ಳಬಹುದು.ನಿಗದಿತ ಮಿತಿ ಮೀರಿದರೂ ಆ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದಿವೆ. ಸದ್ಯ ಶುಲ್ಕ ರಹಿತವಾಗಿ ಹಣ ವಿತ್ ಡ್ರಾಗೆ (ತಿಂಗಳಿಗೆ) ಅದೇ ಬ್ಯಾಂಕಿನ ಎಟಿಎಂ ಆದರೆ ೩, ಅನ್ವ ಬ್ಯಾಂಕಿನ ಎಟಿಎಂ ಆದರೆ ೨ ಮಿತಿ ಇದೆ. ಆದರೆ ಈ ೩ ದಿನ ಈ ನಿಯಮ ಅನ್ವಯಿಸುವುದಿಲ್ಲ.

ಸಾಮಾನ್ಯವಾಗಿ, ಬೇರೆ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ನಿರ್ದಿಷ್ಟ ಮಿತಿಯ ನಂತರ ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ, ತಿಂಗಳಿಗೆ ಉಚಿತವಾಗಿ ಹಣ ಡ್ರಾ ಮಾಡಬಹುದಾದ ವಹಿವಾಟುಗಳಿಗೂ ಮಿತಿ ಇರುತ್ತದೆ. ಆದರೆ, ಮುಷ್ಕರದ ಅವಧಿಯಲ್ಲಿ ಈ ಶುಲ್ಕ ಮತ್ತು ವಹಿವಾಟು ಮಿತಿಗಳಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂಬ ಮಾಹಿತಿ ಗ್ರಾಹಕರಿಗೆ ನೆಮ್ಮದಿ ತಂದಿದೆ.

ಹೀಗಾಗಿ, ಬ್ಯಾಂಕ್ ಶಾಖೆಗಳಿಗೆ ನೇರವಾಗಿ ಭೇಟಿ ನೀಡಬೇಕಾದ ಗ್ರಾಹಕರು ಮುಷ್ಕರದ ಅವಧಿಯಲ್ಲಿ ಸೇವೆಗಳಲ್ಲಿ ವಿಳಂಬವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದೇ ವೇಳೆ ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂನಂತಹ ಡಿಜಿಟಲ್ ಹಾಗೂ ಸ್ವಯಂ ಸೇವಾ ಸೌಲಭ್ಯಗಳು ಗ್ರಾಹಕರಿಗೆ ಪರ್ಯಾಯವಾಗಿ ನೆರವಾಗಲಿವೆ.

ವಾರಕ್ಕೆ ೫ ದಿನ ಕೆಲಸದ ಭರವಸೆ ನೀಡಿರಲಿಲ್ಲ :

ವಾರಕ್ಕೆ ೫ ದಿನ ಮಾತ್ರ ಕೆಲಸ ಎಂಬ ನಿಯಮ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿರುವುಕ್ಕೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಇಲಾಖೆ, ’ಬ್ಯಾಂಕ್ ನೌಕರರ ಸಂಘಗಳಿಗೆ ವಾರಕ್ಕೆ ೫ ದಿನ ಕೆಲಸದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಈ ಹಿಂದೆ ಸರ್ಕಾರ ಭರವಸೆ ನೀಡಿತ್ತು ಎಂದು ಬ್ಯಾಂಕ್ ಸಂಘಗಳು ಹೇಳುತ್ತಿರುವುದು ಸುಳ್ಳು’ ಎಂದು ಸ್ಪಷ್ಟನೆ ನೀಡಿದೆ. ವಾರಕ್ಕೆ ೫ ದಿನ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘ ಸೆ.೨೮ರಿಂದ ೩ ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿದೆ.

ಮುಷ್ಕರದ ವೇಳೆ ಯಾವ ಸೇವೆಗಳು ಲಭ್ಯವಿರುತ್ತವೆ?

ಡಿಜಿಟಲ್ ಮತ್ತು ಸ್ವಯಂ ಸೇವಾ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ

ಯುಪಿಐ ಮೂಲಕ ಹಣ ಪಾವತಿ ಮತ್ತು ಹಣ ವರ್ಗಾವಣೆ

ಇಂಟರ್‌ನೆಟ್ ಬ್ಯಾಂಕಿಂಗ್

ಮೊಬೈಲ್ ಬ್ಯಾಂಕಿಂಗ್

ಎಟಿಎಂ ಮೂಲಕ ಹಣ ಪಡೆಯುವುದು

ಡಿಜಿಟಲ್ ಪಾವತಿ ಸೇವೆಗಳು

ಇತರ ಸ್ವಯಂ ಸೇವಾ ಸೌಲಭ್ಯಗಳು

ಯಾವ ಸೇವೆಗಳಿಗೆ ತೊಂದರೆಯಾಗಬಹುದು?

ಬ್ಯಾಂಕ್ ಶಾಖೆಗಳಲ್ಲಿ ನೇರವಾಗಿ ನಡೆಸುವ ಹಲವು ಸೇವೆಗಳು ಮುಷ್ಕರದಿಂದ ವಿಳಂಬವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು

ಶಾಖೆಯಲ್ಲಿ ನೇರವಾಗಿ ನಗದು ಠೇವಣಿ ಮಾಡುವುದು ಮತ್ತು ಹಣ ಪಡೆಯುವುದು

ಚೆಕ್ ಸ್ವೀಕಾರ ಮತ್ತು ವಿಲೇವಾರಿ

ಇತರ ಚೆಕ್ ಸಂಬಂಧಿತ ಕೆಲಸಗಳು

ಡಿಮ್ಯಾಂಡ್ ಡ್ರಾಫ್ಟ್‌ಗೆ ಸಂಬಂಧಿಸಿದ ಸೇವೆಗಳು

ಖಾತೆ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳು

ಅಗತ್ಯವಿರುವ ಲಾಕರ್ ಸೇವೆಗಳು

ಇತರ ಶಾಖೆ ಆಧಾರಿತ ಸೇವೆಗಳು