Home ಜಿಲ್ಲೆ ಬೆಂಗಳೂರು ಕ.ರಾ.ಮು ವಿಶ್ವ ವಿದ್ಯಾನಿಲಯದ ಕಲಿಕಾ ಕೇಂದ್ರ ಆರಂಭ

ಕ.ರಾ.ಮು ವಿಶ್ವ ವಿದ್ಯಾನಿಲಯದ ಕಲಿಕಾ ಕೇಂದ್ರ ಆರಂಭ

ಕನಕಪುರ, ಜು.೦೨: ಗ್ರಾಮ ವಿದ್ಯಾ ಪ್ರಚಾರಕ ಸಂಘದ ಆಶ್ರಯದಲ್ಲಿ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ವತಿಯಿಂದ ಕಲಿಕಾ ಕೇಂದ್ರವನ್ನು ತೆರೆಯಲಾಗಿದ್ದು,ತಾಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಎಸ್. ಕೆಂಪೇಗೌಡ ಕರೆ ನೀಡಿದರು.


ಗ್ರಾಮ ವಿದ್ಯಾಪ್ರಚಾರಕ ಸಂಘದ ಹಳೆಯ ವಿದ್ಯಾರ್ಥಿಗಳ ಸಂಘದ ಕಚೇರಿಯಲ್ಲಿ ನೂತನವಾಗಿ ೨೦೨೬-೨೭ಗೆ ಸಾಲಿನಿಂದ ಆರಂಭಗೊಳ್ಳುತ್ತಿರುವ ಕಲಿಕಾ ಕೇಂದ್ರದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈಗಾಗಲೇ ನೂರಕ್ಕಿಂತ ಹೆಚ್ಚು ಜನರು ನೊಂದಾವಣಿ ಮಾಡಿಕೊಂಡಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಬಹಳಅನುಕೂಲಕರವಾಗಿದೆ. ಉದ್ಯೋಗದಲ್ಲಿ ಮುಂಬಡ್ತಿಯನ್ನು ವಿದ್ಯಾರ್ಹತೆಯ ಆದಾರ ಮೇಲೆ ಪಡೆಯಲು ಇಲ್ಲಿಯ ಕಲಿಕಾ ಕೇಂದ್ರದಲ್ಲಿ ಕಲಿಕೆಯನ್ನು ಅರಂಭಿಸಿ ವಿದ್ಯಾರ್ಹತೆಯನ್ನು ಪಡೆದು ಉದ್ಯೋಗದಲ್ಲಿ ಬಡ್ತಿ ಪಡೆಯುವಂತೆ ಕರೆ ನೀಡಿದರು.


ಮುಕ್ತವಿಶ್ವವಿದ್ಯಾಲಯದಲ್ಲಿ ಕಲಿಕೆಯನ್ನು ಮಾಡುವವರಿಗೂ ಮತ್ತು ತರಗತಿಗಳಲ್ಲಿ ಕಲಿಕೆಯನ್ನು ಮಾಡಿ ಪದವಿಯನ್ನು ಪಡೆಯುವರಿಗೂ ಯಾವುದೇ ವ್ಯತ್ಯಾಸವಿಲ್ಲ. ಮುಕ್ತವಿಶ್ವವಿದ್ಯಾಲಯದಲ್ಲಿ ಕಲಿಕೆಯನ್ನು ಆರಂಭಿಸುವವರಿಗೆ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತದೆ.ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕೆಂದು ನಮ್ಮ ಸಂಸ್ಥೆ ಅಧ್ಯಕ್ಷರ ಆಶಯವಾಗಿದೆ ಎಂದು ತಿಳಿಸಿದರು.
ಐಕ್ಯೋ ಎಸ್ ಸಿ. ಕೋ ಆರ್ಡಿನೇಟರ್ ಎ.ಪಿ.ಪ್ರಕಾಶ್‌ರವರು ಮಾತನಾಡಿ,ದಿ.ಎಸ್.ಕರಿಯಪ್ಪ ಸ್ಥಾಪಿಸಿರುವ ಈ ಮಹಾಸಂಸ್ಥೆಯಲ್ಲಿ ಕೆ.ಎಸ್.ವೈನವರು ನಮ್ಮ ಕಾಲೇಜಿಗೆ ಶಾಖೆಯನ್ನು ಮತ್ತೆ ಕೊಟ್ಟಿರುವುದು ನಮ್ಮೆಲ್ಲರಿಗೆ ಹರ್ಷದಾಯಕವಾಗಿದೆ ಎಂದರು


ಗ್ರಂಥ ಪಾಲಕರು ಹಾಗೂ ಕೇಂದ್ರದ ಮುಖ್ಯಸ್ಥ ಗೋಪಾಲಕೃಷ್ಣರವರು ಮಾತನಾಡಿ,ಮುಕ್ತ ವಿಶ್ವ ವಿದ್ಯಾಲಯವು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಶಾಖೆಗಳನ್ನು ಇಲ್ಲಿಯವರೆಗೆ ತೆರೆದಿದ್ದಾರೆ.ಆದರೆ ಇದೇ ಪ್ರಥಮ ಬಾರಿಗೆ ಕನಕಪುರದಲ್ಲಿ ಗ್ರಾಮ ವಿದ್ಯಾ ಪ್ರಚಾರ ಸಂಘದ ಆಶ್ರಯದಲ್ಲಿ ಪ್ರಸಕ್ತ ಸಾಲಿನಿಂದ ಕಲಿಕಾ ಕೇಂದ್ರವನ್ನು ಆರಂಭಿಸಿರುವುದಕ್ಕೆ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲಾಗುವುದು.ತಾಲೂಕು ಸೇರಿದಂತೆ ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.


ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕ ಪ್ರಸನ್ನ, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಸತೀಶ್, ಗಣಿತ ಶಾಸ್ತ್ರ ಉಪನ್ಯಾಸಕ ರಘು, ಕನ್ನಡ ವಿಭಾಗದ ಉಪನ್ಯಾಸಕಿ ದೀಪಿಕಾ,ಸೂಪರಿಡೆಂಟ್ ಯೋಗಾನಂದ್, ಸಂಸ್ಥೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.